ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದ ಪೊಲೀಸರ ಮೇಲೆಯೇ ಹಲ್ಲೆ: ಒಂದೇ ಕುಟುಂಬದ 7 ಮಂದಿ ಬಂಧನ

ಹಾವೇರಿ, ಎ.16: ಕೊರೋನ ವೈರಸ್ ಲಾಕ್‍ಡೌನ್ ಹಿನ್ನೆಲೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ತೆಗ್ಗಿಹಳ್ಳಿ ಗ್ರಾಮದಲ್ಲಿ ನಡದಿದೆ ಎನ್ನಲಾಗಿದೆ.
ಲಾಕ್‍ಡೌನ್ ಮುಂದುವರಿದ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಪೊಲಿಸರು ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಗಸ್ತು ತಿರುಗುವ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಅವರು ಗುಂಪು ಗುಂಪಾಗಿ ಸೇರಬೇಡಿ ಎಂದಿದ್ದಕ್ಕೆ ಕುಟುಂಬವೊಂದರ ಸದಸ್ಯರು ಏಕಾಏಕಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ದಿನನಿತ್ಯದಂತೆ ಸವಣೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಸವಣೂರು ತಾಲೂಕು ಪಂಚಾಯತ್ ಅಧಿಕಾರಿ ಮುನಿಯಪ್ಪ ತಗ್ಗಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಗ್ರಾಮದಲ್ಲಿ ಗುಂಪು ಗುಂಪಾಗಿ ಕುಳಿತುಕೊಂಡಿದ್ದ ಕುಟುಂಬವೊಂದರ ಸದಸ್ಯರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೇಳಿದ್ದಕ್ಕೆ ಅಧಿಕಾರಿ ಮುನಿಯಪ್ಪ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ತಕ್ಷಣವೇ ಅವರು ಪೊಲಿಸರಿಗೆ ಮಾಹಿತಿ ತಿಳಿಸಿದ್ದು, ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಿಪಿಐ ಶಶಿಧರ ಹಾಗೂ ಪೊಲಿಸ್ ಕಾನ್‍ಸ್ಟೇಬಲ್‍ಗಳ ಮೇಲೆ ಕುಟುಂಬ ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಕಣವಿ ಕುಟುಂಬದ 7 ಜನರನ್ನು ಬಂಧಿಸಲಾಗಿದ್ದು, ಘಟನೆ ಬಗ್ಗೆ ಸವಣೂರು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳು ಪೊಲೀಸ್ ಕಾನ್‍ಸ್ಟೇಬಲ್‍ಗಳಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.







