ಬೀದರ್ ಶಾಹೀನ್ ಶಾಲೆ: ಆಗ ‘ದೇಶದ್ರೋಹಿ’ ಸಂಸ್ಥೆ , ಈಗ ಸರಕಾರಿ ಕ್ವಾರಂಟೈನ್ ಕೇಂದ್ರ !
193 ಮಂದಿಗೆ ಶಾಲೆಯಿಂದ ಎಲ್ಲಾ ವ್ಯವಸ್ಥೆ

ಬೀದರ್, ಎ. 16: ಇಲ್ಲಿನ ಖ್ಯಾತ ಶಿಕ್ಷಣ ಸಂಸ್ಥೆ ಶಾಹೀನ್ ಬಳಗದ ಶಾಹೀನ್ ಉರ್ದು ಪ್ರಾಥಮಿಕ ಶಾಲೆಯನ್ನು ಕೊರೋನ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಇದೀಗ ಸರಕಾರಿ ಕ್ವಾರಂಟೈನ್ ಕೇಂದ್ರವಾಗಿ ಮಾರ್ಪಡಿಸಲಾಗಿದೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ನಾಟಕವೊಂದರಲ್ಲಿ ಪ್ರಧಾನಿ ಮೋದಿ ಅವರನ್ನು ಅವಮಾನಿಸಲಾಗಿದೆ ಎಂಬ ಆರೋಪದ ಮೇಲೆ ದೇಶದ್ರೋಹದ ಪ್ರಕರಣ ದಾಖಲಾಗಿ ಓರ್ವ ಶಿಕ್ಷಕಿ ಹಾಗು ವಿದ್ಯಾರ್ಥಿನಿಯ ತಾಯಿಯನ್ನು ಬಂಧಿಸಿ ಶಾಲೆ ದೇಶಾದ್ಯಂತ ಸುದ್ದಿಯಾದ ಕೆಲವೇ ತಿಂಗಳ ಬಳಿಕ ಇದೀಗ ಈ ಸುದ್ದಿ ಬಂದಿದೆ.
ಕೋವಿಡ್ 19 ಸೋಂಕಿತರೊಂದಿಗೆ ಮೊದಲು ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ನಲ್ಲಿಡಲು ಶಾಹೀನ್ ಶಾಲೆಯನ್ನು ಬಳಸಲು ಅನುವು ಮಾಡಿಕೊಡುವಂತೆ ಜಿಲ್ಲಾಡಳಿತ ಶಾಹೀನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರಲ್ಲಿ ವಿನಂತಿಸಿತ್ತು. ಇದಕ್ಕೆ ಅವರು ಒಪ್ಪಿಗೆ ನೀಡಿದ ಬಳಿಕ ಶಾಲೆ ಕ್ವಾರಂಟೈನ್ ಕೇಂದ್ರವಾಗಿದೆ.

ಶಾಹೀನ್ ಶಾಲೆಯ ಮುಖ್ಯಸ್ಥರು, ಶಿಕ್ಷಕಿ ಹಾಗು ವಿದ್ಯಾರ್ಥಿನಿಯ ತಾಯಿಯ ಮೇಲೆ ದೇಶದ್ರೋಹದ ಪ್ರಕರಣ ದಾಖಲಾದಾಗ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣದಲ್ಲಿ ಪೊಲೀಸರು ಆಗಾಗ ಶಾಲೆಗೇ ಭೇಟಿ ನೀಡಿ ಅಪ್ರಾಪ್ತ ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು.
"ನಮ್ಮ ಮುಖ್ಯ ಕಟ್ಟಡದಲ್ಲಿ ಈಗ 193 ಜನರು ಕ್ವಾರಂಟೈನ್ ನಲ್ಲಿದ್ದಾರೆ. ಪ್ರಾರಂಭದಲ್ಲಿ 130 ಜನರಿದ್ದರು. ಬುಧವಾರ ಮತ್ತೆ 60 ಜನರು ಸೇರಿದ್ದಾರೆ. ಇದರಲ್ಲಿ ಕೊರೊನ ಸೋಂಕಿತರ ಜೊತೆ ಮೊದಲು ಸಂಪರ್ಕಕ್ಕೆ ಬಂದ ಪುರುಷರು, ಮಹಿಳೆಯರು ಹಾಗು ಮಕ್ಕಳೂ ಇದ್ದಾರೆ. ಹಿಂದುಳಿದ ವರ್ಗಗಳ ಹಾಸ್ಟೆಲ್ ನಲ್ಲಿ ಇದ್ದ ಕ್ವಾರಂಟೈನ್ ಕಟ್ಟಡದ ಬಗ್ಗೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾದ ಬಳಿಕ ಅವರನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ" ಎಂದು ಶಾಹೀನ್ ಸಮೂಹದ ಸಿಇಒ ತೌಸೀಫ್ ಮಡಿಕೇರಿ ಹೇಳಿದ್ದಾರೆ.


"ನಾವು ಅವರಿಗೆ ಎಲ್ಲ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ಆಹಾರ, ತಿಂಡಿ, ಮಾಸ್ಕ್ ಗಳು ಮತ್ತು ಅವರಿಗೆ ಅಗತ್ಯವಿರುವ ಎಲ್ಲವನ್ನೂ ಒದಗಿಸುತ್ತಿದ್ದೇವೆ. ಆಹಾರವನ್ನು ಅತ್ಯಂತ ಸ್ವಚ್ಛ ಪ್ರದೇಶದಲ್ಲಿ ತಯಾರಿಸಲಾಗುತ್ತಿದೆ. ಇಲ್ಲಿರುವವರ ರಕ್ತದ ಸ್ಯಾಂಪಲ್ ಸಂಗ್ರಹಿಸಲು ಅರೋಗ್ಯ ಕಾರ್ಯಕರ್ತರೂ ಇಲ್ಲಿಗೆ ಬರುತ್ತಿದ್ದಾರೆ. ಸರಕಾರ ಬಯಸಿದಷ್ಟು ಕಾಲ ಅವರಿಲ್ಲಿ ಇರಬಹುದು" ಎಂದು ತೌಸೀಫ್ ಮಡಿಕೇರಿ ಹೇಳಿದ್ದಾರೆ.
ಈಗಾಗಲೇ ಎರಡು ವಾರಗಳ ಹಿಂದೆಯೇ ಕೊರೋನ ಜಾಗೃತಿ ಮೂಡಿಸಲು ಮತ್ತು ಅರೋಗ್ಯ ಕಾರ್ಯಕರ್ತರಿಗಾಗಿ ಸಂಸ್ಥೆಯ ಬಸ್ಸು ಮತ್ತು ಇತರ ವಾಹನಗಳನ್ನು ಒದಗಿಸಲಾಗಿದೆ. ಒಂದು ವಾರದ ಹಿಂದೆ ಬೆಡ್ ಗಳು ಮತ್ತು ವಾಸಕ್ಕೆ ಸ್ಥಳ ಒದಗಿಸಲು ಮನವಿ ಬಂತು ಎಂದು ಅವರು ಮಾಹಿತಿ ನೀಡಿದರು.
ಶಾಹೀನ್ ಶಾಲೆಯನ್ನು ಜಿಲ್ಲಾಡಳಿತ ಕ್ವಾರಂಟೈನ್ ಕೇಂದ್ರ ಮಾಡಿದೆ. ನಾವು ಮೊದಲು ಇದೇ ಶಾಲೆಯವರಲ್ಲಿ ಮನವಿ ಮಾಡಿದ್ದೆವು ಎಂದು ಅಸಿಸ್ಟಂಟ್ ಕಮಿಷನರ್ ಅಕ್ಷಯ್ ಶ್ರೀಧರ್ ಅವರು ಹೇಳಿದ್ದಾರೆ.












