ಎ.17: ಶುಕ್ರವಾರ ‘ಜುಮಾ’ ಬದಲು ಮನೆಯಲ್ಲೇ ‘ಲುಹರ್’ ನಮಾಝ್
ಮಂಗಳೂರು, ಎ.16: ಕೊರೋನ ವೈರಸ್ ತಡೆಗಟ್ಟುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ನಡೆಸುತ್ತಿರುವ ಮುಂಜಾಗ್ರತಾ ಕ್ರಮಕ್ಕೆ ಪೂರಕವಾಗಿ ದೇಶ ಹಾಗೂ ಸಮಾಜದ ಹಿತದೃಷ್ಟಿಯಿಂದ ದಿನದ ಐದು ಬಾರಿಯ ನಮಾಝ್ ಅಲ್ಲದೆ ಎ.17ರ ಶುಕ್ರವಾರವೂ ಕೂಡ ಜುಮಾ ನಮಾಝ್‌ನ ಬದಲು ಮನೆಯಲ್ಲೇ ‘ಲುಹರ್’ ನಮಾಝ್ ನಿರ್ವಹಿಸುವುದು ಅನಿವಾರ್ಯವಾಗಿದೆ.
ಮಾ.27 ಮತ್ತು ಎ.3 ಹಾಗೂ ಎ.10ರ ಶುಕ್ರವಾರ ಮಸೀದಿಯಲ್ಲಿ ಇಮಾಮ್/ಮುಅದ್ಸಿನ್ ಹೊರತುಪಡಿಸಿ ಬೇರೆ ಯಾರೂ ನಮಾಝ್ ಮಾಡಿರಲಿಲ್ಲ. ಎಲ್ಲರೂ ಮನೆಯಲ್ಲೇ ಲುಹರ್ ನಮಾಝ್ ಮಾಡಿದ್ದರು. ಇದೀಗ ಎ.17ರಂದು ಕೂಡ ಮಸೀದಿಯ ಬದಲು ಮನೆಯಲ್ಲೇ ನಮಾಝ್ ಮಾಡಲು ನಿರ್ದೇಶಿಸಲಾಗಿದೆ.
ಜನ ಸಂದಣಿಯಿರುವ ಕಡೆ ರೋಗ ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಮತ್ತು ಆಡಳಿತ ವ್ಯವಸ್ಥೆ ಕೂಡ ಮಸೀದಿಗಳಲ್ಲೂ ಹೆಚ್ಚಿನ ಜನರು ಸೇರದಂತೆ ಸ್ಪಷ್ಟವಾಗಿ ಸೂಚಿಸಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಇದನ್ನು ಎಲ್ಲರೂ ಪಾಲಿಸುವ ಅಗತ್ಯವಿದೆ. ಹಾಗಾಗಿ ಮಸೀದಿಯಲ್ಲಿ ಶುಕ್ರವಾರದ ಜುಮಾ ನಮಾಝ್‌ನ ಬದಲು ತಮ್ಮ ಮನೆಗಳಲ್ಲೇ ಲುಹರ್ ನಮಾಝ್ ನಿರ್ವಹಿಸಲು ಕೋರಲಾಗಿದೆ.





