ಕಲಬುರಗಿ: ಕೊರೋನ ಹಾಟ್‍ಸ್ಪಾಟ್ ಜಿಲ್ಲೆಯಲ್ಲೇ ಲಾಕ್‍ಡೌನ್ ಉಲ್ಲಂಘಿಸಿ ಜಾತ್ರೆ !
200ಕ್ಕೂ ಹೆಚ್ಚು ಮಂದಿ ಭಾಗಿ

ಕಲಬುರಗಿ, ಎ.16: ಕೊರೋನ ಸೋಂಕು ಸಂಬಂಧ ಹಾಟ್‍ಸ್ಪಾಟ್ ಎಂದು ಗುರುತಿಸಿರುವ ಕಲಬುರಗಿಯಲ್ಲೇ ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿ ಜಾತ್ರೆ ಮಹೋತ್ಸವ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ.
ಕೋವಿಡ್-19 ನಿಯಂತ್ರಿಸಲು ಕೇಂದ್ರ ಸರಕಾರ ಎರಡನೇ ಬಾರಿ ಲಾಕ್ ಡೌನ್ ಘೋಷಣೆ ಮಾಡಿದ್ದು, ಅಲ್ಲದೇ ಕಲಬುರಗಿಯಲ್ಲಿ ಜಿಲ್ಲೆಯಲ್ಲಿ ಕೊರೋನಗೆ ದೇಶದ ಮೊದಲ ವ್ಯಕ್ತಿ ಬಲಿಯಾಗಿದ್ದಾನೆ. ಜಿಲ್ಲೆಯಲ್ಲಿ ಸೋಂಕು ಪೀಡಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಈ ಸಂದರ್ಭದಲ್ಲಿ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮಸ್ಥರು ನಿಯಮವನ್ನು ಗಾಳಿಗೆ ತೂರಿ 200ಕ್ಕೂ ಹೆಚ್ಚು ಜನರು ಸೇರಿ ಜಾತ್ರೆ ನಡೆಸಿರುವ ಘಟನೆ ಇಂದು ನಡೆದಿದೆ.
ಬೆಳಗ್ಗೆ 6 ಗಂಟೆ ಸುಮಾರಿಗೆ ರಾವೂರ್ ಗ್ರಾಮದ ಸಿದ್ದಲಿಂಗೇಶ್ವರ ದೇವರ ಜಾತ್ರಾ ರಥೋತ್ಸವ ನೇರವೇರಿಸಿದ್ದಾರೆ. ಕನಿಷ್ಠ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜಾತ್ರಾ ಮಹೋತ್ಸವದಲ್ಲಿ ಸುಮಾರು 200ಕ್ಕೂ ಹೆಚ್ಚು ಜನರು ಭಾಗಿಯಾಗಿ ರಥೋತ್ಸವ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ರಾವೂರ್ ಗ್ರಾಮದಿಂದ ಕೇವಲ 4 ಕಿ.ಮೀ ದೂರದಲ್ಲಿ ವಾಡಿ ಪಟ್ಟಣ ಇದೆ. ಈಗಾಗಲೇ ಇಲ್ಲಿ ಇಬ್ಬರಿಗೆ ಕೊರೋನ ಸೋಂಕು ಕಾಣಿಸಿಕೊಂಡಿದ್ದು, ವಾಡಿ ಪಟ್ಟಣದಾದ್ಯಂತ ಕಟ್ಟೆಚ್ಚರ ವಹಿಸಿ ಸೀಲ್ ಡೌನ್ ಮಾಡಲಾಗಿದೆ. ಸದ್ಯ ಕಲಬುರಗಿ ಜಿಲ್ಲೆಯನ್ನು ಕೊರೋನ ಹಾಟ್ ಸ್ಪಾಟ್ ಎಂದು ಗುರುತಿಸಿ ವೈರಸ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಹಗಲು ರಾತ್ರಿ ಶ್ರಮಿಸುತ್ತಿದೆ.
ಜಿಲ್ಲಾದ್ಯಂತ ಕಲಾಂ 144 ನಿಷೇದಾಜ್ಞೆ ಜಾರಿಯಲ್ಲಿದೆ. ಅಲ್ಲದೆ, ಯಾವುದೇ ರೀತಿಯ ಜಾತ್ರೆ, ಉರೂಸ್, ಸಭೆ, ಸಮಾರಂಭಗಳನ್ನು ನಡೆಸದಂತೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದೆ. ಆದರೂ, ಸಹ ಗ್ರಾಮಸ್ಥರು ನಿಷೇಧಾಜ್ಞೆ ನಡುವೆಯೂ ಜಾತ್ರಾ ಮಹೋತ್ಸವ ನಡೆಸಿದ್ದಾರೆ. ಆದರೆ ಜಾತ್ರಾ ಮಹೋತ್ಸವ ತಡೆಯಬೇಕಾದ ತಾಲೂಕು ಮಟ್ಟದ ಅಧಿಕಾರಿ ವರ್ಗ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.







