ಚಾಮರಾಜನಗರ: ಕಂಗಾಲಾಗಿದ್ದ ಕೊಯಮತ್ತೂರು ಮೂಲದ ಕುಟುಂಬಕ್ಕೆ ಆಶ್ರಯ ಕಲ್ಪಿಸಿದ ಜಿಲ್ಲಾಧಿಕಾರಿ

ಚಾಮರಾಜನಗರ, ಏ.16: ಜಿಲ್ಲೆಯ ಕೊಳ್ಳೇಗಾಲದಲ್ಲಿರುವ ಚಿಕ್ಕಮಕ್ಕಳನ್ನು ಕರೆದೊಯ್ಯಲು ಬಂದು ಕೊರೊನಾ ಲಾಕ್‍ಡೌನ್‍ನಿಂದ ಜಿಲ್ಲೆಯಲ್ಲೇ ಸಿಲುಕಿಕೊಂಡ ಕೊಯಮತ್ತೂರು ಮೂಲದ ಕುಟುಂಬಕ್ಕೆ, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ನಗರದಲ್ಲೇ ಆಶ್ರಯ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೊಳ್ಳೇಗಾಲದಲ್ಲಿ ಸಂಬಂಧಿಯೊಬ್ಬರ ಮನೆಯಲ್ಲಿದ್ದ ತಮ್ಮ ನಾಲ್ಕುವರೆ ಹಾಗೂ ಒಂದೂವರೆ ವರ್ಷದ ಮಕ್ಕಳ ಆರೋಗ್ಯದಲ್ಲಿ ಏರುಪೇರಾದ ಕಾರಣ ಕೊಯಮತ್ತೂರು ಮೂಲದ ಸಾಕ್ರೆಟಿಸ್ ಮತ್ತು ಗಾಯತ್ರಿ ದಂಪತಿ ಇದೇ ತಿಂಗಳಿನ ಆರಂಭದಲ್ಲಿ ಅನುಮತಿಯೊಂದಿಗೆ ಜಿಲ್ಲೆಗೆ ಆಗಮಿಸಿದ್ದರು. ಈ ವೇಳೆ ಮಕ್ಕಳನ್ನು ವಾಪಾಸ್ಸು ಕೊಯಮತ್ತೂರಿಗೆ ಹೋಗಲು ಅನುವಾದಾಗ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಲಾಕ್‍ಡೌನ್ ಇದ್ದ ಹಿನ್ನಲೆಯಲ್ಲಿ ಅವರ ಸಂಚಾರಕ್ಕೆ ಅನುಮತಿ ನಿರಾಕರಿಸಲಾಯಿತು.
ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರನ್ನು ಮಕ್ಕಳೊಂದಿಗೆ ದಂಪತಿ ಖುದ್ದು ಭೇಟಿ ಮಾಡಿ ಸಂಚಾರಕ್ಕೆ ಅನುಮತಿ ಕೋರಿದರು. ಆದರೆ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಇಲ್ಲದ ಕಾರಣ ಅಂತರರಾಜ್ಯಕ್ಕೆ ತೆರಳಲು ಅವಕಾಶ ನೀಡಲು ಸಾಧ್ಯವಿಲ್ಲವೆಂದು ಇಲ್ಲಿಯೇ ಉಳಿಯುವಂತೆ ಜಿಲ್ಲಾಧಿಕಾರಿಯವರು ತಿಳಿಸಿದರು. ವಾಪಸ್ಸು ಸಂಬಂಧಿ ಮನೆಗೆ ಹೋಗಲು ಒಪ್ಪದ ಹಾಗೂ ಅಸಹಾಯಕತೆಯಿಂದ ಆತಂಕಕ್ಕೆ ಒಳಗಾದ ದಂಪತಿಯನ್ನು ಜಿಲ್ಲಾಧಿಕಾರಿಯವರೇ ಸಮಾಧಾನಿಸಿ ನಗರದಲ್ಲೇ ಉಳಿಯಲು ಆಶ್ರಯ ಕಲ್ಪಿಸುವ ಭರವಸೆ ನೀಡಿದರು.
ಲಾಕ್‍ಡೌನ್ ಅನಿವಾರ್ಯತೆ ಹಾಗೂ ಮಹತ್ವ ಕುರಿತು ಮನವರಿಕೆ ಮಾಡಿಕೊಟ್ಟ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ಕೊಟ್ಟ ಭರವಸೆಯಂತೆ ಚಾಮರಾಜನಗರ ನಗರದಲ್ಲೇ ಅವರ ವಾಸಕ್ಕೆ ಸೂಕ್ತ ವ್ಯವಸ್ಥೆ ಮಾಡುವ ಮೂಲಕ ತಮಿಳುನಾಡು ಕುಟುಂಬಕ್ಕೆ ನಿರಾಳವಾಗಲು ಕಾರಣರಾಗಿದ್ದಾರೆ.
ಜಿಲ್ಲೆಗೆ ಮಕ್ಕಳನ್ನು ಕಾಣಲು ಬಂದು ಸೂಕ್ತ ಸೂರು ದೊರಕದೇ ಪರದಾಟಕ್ಕೆ ಸಿಲುಕಿದ್ದ ಕೊಯಮತ್ತೂರು ಮೂಲದ ಕುಟುಂಬಕ್ಕೆ ಜಿಲ್ಲಾಧಿಕಾರಿ ಅವರು ಸರ್ಕಾರಿ ಐಬಿಯಲ್ಲೇ ವಸತಿ ಒದಗಿಸಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ನಿತ್ಯದ ಊಟ, ಉಪಹಾರವನ್ನು ಸಹ ಒದಗಿಸಲು ವ್ಯವಸ್ಥೆ ಮಾಡಿದ್ದಾರೆ. ಮಕ್ಕಳಿಗೆ ಪೌಷ್ಠಿಕಾಂಶಕ್ಕೆ ಅಗತ್ಯವಿರುವ ಹಾಲು-ಹಣ್ಣು ಮುಂತಾದ ಆಹಾರ ಪದಾರ್ಥಗಳನ್ನು ಸಹ ನೀಡಲಾಗುತ್ತಿದೆ.
ತಮಿಳುನಾಡಿನಿಂದ ಬಂದ ಕಾರಣ ದಂಪತಿ ಹಾಗೂ ಇಬ್ಬರು ಮಕ್ಕಳ ಆರೋಗ್ಯ ಕುರಿತು ಸ್ಕ್ರೀನಿಂಗ್ ಮಾಡಲಾಗಿದೆ. ಲಾಕ್‍ಡೌನ್‍ನಿಂದ ಅಪರಿಚಿತ ಊರಿನಲ್ಲಿ ಸಿಲುಕಿದ್ದವರಿಗೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತೋರಿದ ಕಾಳಜಿಗೆ ಕುಟುಂದವರು ಸಂತಸ ವ್ಯಕ್ತಪಡಿಸಿದ್ದಾರೆ. ಸಂಕಷ್ಟ ಪರಿಸ್ಥಿತಿಯಲ್ಲೂ ಅಗತ್ಯವಿರುವವರಿಗೆ ಜಿಲ್ಲಾಧಿಕಾರಿ ಅವರು ತ್ವರಿತವಾಗಿ ಸ್ಪಂದಿಸಿ ವ್ಯವಸ್ಥೆ ಕಲ್ಪಿಸಿಕೊಡುವ ಮೂಲಕ ಮಾದರಿಯಾಗಿದ್ದಾರೆ.
ಕೊಯಮತ್ತೂರಿಗೆ ತೆರಳಲು ಜಿಲ್ಲಾಧಿಕಾರಿ ಅವರಲ್ಲಿ ಅನುಮತಿ ಕೋರಿದಾಗ ಅವರು ನಮಗೆ ಲಾಕ್‍ಡೌನ್ ಬಗ್ಗೆ ಮನವರಿಗೆ ಮಾಡಿಕೊಟ್ಟು, ಇಲ್ಲೇ ಉಳಿಯಬೇಕಾಗುತ್ತದೆ ಎಂದರು. ಜಿಲ್ಲೆಯಲ್ಲಿ ಎಲ್ಲಿ ವಾಸ್ತವ್ಯ ಮಾಡಬೇಕೆಂದು ದಿಕ್ಕು ತೋಚದೇ ಇದ್ದ ನಮ್ಮ ಮನಸ್ಸಿನ ದುಗುಡವನ್ನು ಅರ್ಥ ಮಾಡಿಕೊಂಡ ಜಿಲ್ಲಾಧಿಕಾರಿಯವರು ಪ್ರವಾಸಿ ಮಂದಿರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ. ಅಗತ್ಯ ಎಲ್ಲಾ ಸಾಮಾಗ್ರಿಗಳನ್ನು ಒದಗಿಸಿದ್ದಾರೆ. ಜಿಲ್ಲಾಧಿಕಾರಿಯವರ ಸಹಾಯಗುಣದಿಂದ ಇಲ್ಲಿ ನಮಗೆ ಯಾವುದೇ ಕೊರತೆ ಉಂಟಾಗಿಲ್ಲ. ಸಂತೋಷದಿಂದ್ದೇವೆ ಎಂದು ಕೊಯಮತ್ತೂರಿನ ಗಾಯತ್ರಿ ಹಾಗೂ ಸಾಕ್ರೆಟಿಸ್ ದಂಪತಿ ಹೇಳಿದ್ದಾರೆ.







