ಕೊರೋನ ವೈರಸ್ ಕುರಿತು ಮಿಥ್ಯೆಗಳ ಹಿಂದಿನ ಸತ್ಯಗಳು
ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡು ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನ ವೈರಸ್ ಕುರಿತು ಸಾಕಷ್ಟು ಮಿಥ್ಯೆಗಳು ಸೃಷ್ಟಿಯಾಗಿವೆ. ಜೊತೆಗೆ ಜನರಲ್ಲಿ ತಪ್ಪುಗ್ರಹಿಕೆಯನ್ನುಂಟು ಮಾಡುವ ಹಲವಾರು ಪೋಸ್ಟ್‌ಗಳು ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿವೆ. ಇಂತಹ ಕೆಲವು ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳು ಇಲ್ಲಿವೆ.....
► ಕೊರೋನ ವೈರಸ್ ರೋಗಿಯಿಂದ ಸೋಂಕು ಹರಡಲು 10 ನಿಮಿಷಗಳು ಸಾಕು
-ಕೋವಿಡ್-19 ಪಾಸಿಟಿವ್ ರೋಗಿಯ ಸಂಪರ್ಕಕ್ಕೆ ಬಂದ ವ್ಯಕ್ತಿಗೆ ಕೆಲವೇ ಸೆಕೆಂಡ್‌ಗಳು ಅಥವಾ ನಿಮಿಷಗಳಲ್ಲಿ ಸೋಂಕು ಹರಡಬಲ್ಲದು. ವೈರಸ್ ಹರಡಲು 10 ನಿಮಿಷ ಅಥವಾ 30 ನಿಮಿಷಗಳಂತಹ ಯಾವುದೇ ನಿಗದಿತ ಕಾಲಾವಧಿಯಿಲ್ಲ. ಹೀಗಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು,ಕೈಗಳನ್ನು ಆಗಾಗ್ಗೆ ಸ್ವಚ್ಛವಾಗಿ ತೊಳೆದುಕೊಳ್ಳುತ್ತಿರುವುದು ಮತ್ತು ಹೊರಗಡೆ ಹೋದಾಗ ಸುರಕ್ಷಿತ ಮಾಸ್ಕ್ ಧರಿಸುವುದು ಇವು ಸೋಂಕು ಪ್ರಸರಣವನ್ನು ತಡೆಯಲು ಅತ್ಯುತ್ತಮ ಮಾರ್ಗಗಳಾಗಿವೆ.
►ನಿಮ್ಮ ಶ್ವಾಸಕೋಶಗಳ ಕಾರ್ಯಸಾಮರ್ಥ್ಯವನ್ನು ಹೆಚ್ಚಿಸಲು ಆಳವಾಗಿ ಉಸಿರಾಡಿಸಿ
-‘ಆಳವಾಗಿ ಉಸಿರೆಳೆದುಕೊಳ್ಳಿ ಮತ್ತು 10 ಸೆಕೆಂಡ್‌ಗೂ ಅಧಿಕ ಕಾಲ ಉಸಿರನ್ನು ಹಿಡಿದಿಟ್ಟುಕೊಳ್ಳಿ. ಕೆಮ್ಮು,ಕಿರಿಕಿರಿ,ಎದೆ ಕಟ್ಟುವಿಕೆ ಇವು ಯಾವುದೇ ಇಲ್ಲದೆ ನೀವು ಇದರಲ್ಲಿ ಯಶಸ್ವ್ವಿಯಾದರೆ ನಿಮ್ಮ ಶ್ವಾಸಕೋಶಗಳಲ್ಲಿ ಫೈಬ್ರೋಸಿಸ್ (ನಾರಿನಿಂದ ತುಂಬಿದ ಅಂಗಾಂಶ ರಚನೆ) ಇಲ್ಲ ಎನ್ನುವುದು ಸಿದ್ಧವಾಗುತ್ತದೆ. ಇದು ಪ್ರಾಥಮಿಕವಾಗಿ ಯಾವುದೇ ಸೋಂಕು ಇಲ್ಲ ಎನ್ನುವುದನ್ನು ಸೂಚಿಸುತ್ತದೆ ’ಎಂಬ ಪೋಸ್ಟ್‌ವೊಂದು ವಾಟ್ಸ್ ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಇದನ್ನು ರುಜುವಾತುಗೊಳಿಸುವ ಯಾವುದೇ ವೈಜ್ಞಾನಿಕ ಸಾಕ್ಷಾಧಾರಗಳಿಲ್ಲ. ಅಲ್ಲದೆ ಆಳವಾಗಿ ಉಸಿರಾಡುವಾಗ ಕೆಮ್ಮು ಬಂದರೆ ಅದು ಫೈಬ್ರೋಸಿಸ್ ಅನ್ನು ಸೂಚಿಸುವುದಿಲ್ಲ,ಆದರೆ ಶ್ವಾಸನಾಳಗಳಲ್ಲಿ ಸೋಂಕಿನ ಲಕ್ಷಣವಾಗಿರಬಹುದು ಎನ್ನುತ್ತಾರೆ ತಜ್ಞರು.
► ಒಣ ಕೆಮ್ಮು,ಜೊತೆಗೆ ಮೂಗಿನಿಂದ ನೀರಿಳಿಯುತ್ತಿಲ್ಲದಿದ್ದರೆ ಅದು ಗ್ಯಾರಂಟಿ ಕೊರೋನ ವೈರಸ್ ಸೋಂಕು
-ನಿಮ್ಮ ಮೂಗಿನಲ್ಲಿ ನೀರಿಳಿಯುತ್ತಿದ್ದರೆ ಮತ್ತು ಕಫ ಆಗಿದ್ದರೆ ಅದು ಸಾಮಾನ್ಯ ಶೀತ ಹಾಗು ಒಣ ಕೆಮ್ಮು ಬರುತ್ತಿದ್ದು ಮೂಗಿನಿಂದ ನೀರು ಇಳಿಯುತ್ತಿಲ್ಲವಾದರೆ ಅದು ಕೊರೋನವೈರಸ್ ಸೋಂಕಿನಿಂದ ಉಂಟಾದ ನ್ಯುಮೋನಿಯಾವನ್ನು ಸೂಚಿಸುತ್ತದೆ ಎಂಬ ಸಾಮಾನ್ಯ ತಪ್ಪುಗ್ರಹಿಕೆಯಿದೆ. ಯಾರಿಗೋ ಒಣ ಕೆಮ್ಮು ಇದೆಯೆಂದಾಕ್ಷಣ ಆತನಲ್ಲಿ ಕೊರೋನ ವೈರಸ್ ಸೋಂಕು ಇದೆ ಎಂದು ಅರ್ಥವಲ್ಲ. ಅದೇ ರೀತಿ ಹಸಿ ಕೆಮ್ಮು ಇದ್ದರೂ ಅದು ಕೊರೋನ ವೈರಸ್‌ನ ಲಕ್ಷಣವಾಗಿರುವ ಸಾಧ್ಯತೆಯಿದೆ. ನಿಮ್ಮಲ್ಲಿ ಫ್ಲೂನಂತಹ ಲಕ್ಷಣಗಳು ಕಂಡು ಬಂದರೆ ಇಲ್ಲದ ಊಹೆಗಳನ್ನು ಮಾಡುವ ಬದಲು ವೈದ್ಯರನ್ನು ಸಂಪರ್ಕಿಸುವುದು ಜಾಣತನವಾಗುತ್ತದೆ.
► ತಲೆಯನ್ನು ಬೋಳಿಸಿಕೊಂಡರೆ ಕೊರೋನ ವೈರಸ್‌ನ ವಿರುದ್ಧ ರಕ್ಷಣೆ ಸಿಗುತ್ತದೆ
-ಕೊರೋನ ವೈರಸ್ ಕೂದಲಿನ ಮೂಲಕ ಹರಡುವುದಿಲ್ಲ. ಆದರೆ ಉದ್ದ ಕೂದಲು ಹೊಂದಿದ್ದರೆ ಸೋಂಕಿತ ವ್ಯಕ್ತಿಯು ಕೆಮ್ಮು ಅಥವಾ ಸೀನಿನ ಮೂಲಕ ಹೊರಹೊಮ್ಮಿಸುವ ಹನಿಗಳ ಸಂಪರ್ಕಕ್ಕೆ ಅದು ಬರುವ ಸಾಧ್ಯತೆಯು ಹೆಚ್ಚಾಗಿರುತ್ತದೆ. ಇಂತಹ ಸ್ಥಿತಿಯಲ್ಲಿ ಕೂದಲನ್ನು ಮುಟ್ಟಿಕೊಂಡು ಕೈಗಳನ್ನು ತೊಳೆಯದೆ ಕಣ್ಣುಗಳು,ಬಾಯಿ ಮತ್ತು ಮೂಗನ್ನು ಸ್ಪರ್ಶಿಸುವುದು ಸೋಂಕನ್ನು ಹರಡಬಹುದು. ತಲೆ ಬೋಳಿಸಿಕೊಂಡರೆ ನೀವು ಕೊರೋನ ವೈರಸ್ ಸೋಂಕಿನಿಂದ ಸುರಕ್ಷಿತರಾಗಿರುತ್ತಿರಿ ಎನ್ನುವುದು ಇದರ ಅರ್ಥವಲ್ಲ.
► ಮೌತ್ ವಾಷ್‌ನಿಂದ ಮುಕ್ಕಳಿಸುವಿಕೆ/ಸಲೈನ್‌ನಿಂದ ಮೂಗು ತೊಳೆಯುವಿಕೆ ಸೋಂಕನ್ನು ತಡೆಯುತ್ತದೆ
-ಇಲ್ಲ,ವೌತ್‌ವಾಷ್‌ನಿಂದ ಬಾಯಿ ಮುಕ್ಕಳಿಸುತ್ತಿದ್ದರೆ ಅಥವಾ ಸಲೈನ್‌ನಿಂದ ಮೂಗನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿದ್ದರೆ ಕೊರೋನ ವೈರಸ್ ಸೋಂಕು ಅಥವಾ ಇತರ ಯಾವುದೇ ಉಸಿರಾಟದ ಕಾಯಿಲೆಯ ವಿರುದ್ಧ ರಕ್ಷಣೆ ದೊರೆಯುತ್ತದೆ ಎನ್ನುವುದಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲ.
► ಸಾಮಾನ್ಯ ಆ್ಯಂಟಿಬಯಾಟಿಕ್‌ಗಳು ಕೊರೋನ ವೈರಸ್‌ನ್ನು ತಡೆಯುತ್ತವೆ
-ಆ್ಯಂಟಿಬಯಾಟಿಕ್‌ಗಳು ಬ್ಯಾಕ್ಟೀರಿಯಾ ಸೋಂಕುಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತವೆ, ಹೀಗಾಗಿ ಅವು ವೈರಸ್‌ಗಳ ವಿರುದ್ಧ ಪರಿಣಾಮಕಾರಿಯಲ್ಲ. ಕೊರೋನ ವೈರಸ್ ಕೂಡ ಒಂದು ವೈರಾಣು ಆಗಿರುವುದರಿಂದ ಅದರ ವಿರುದ್ಧ ಆ್ಯಂಟಿಬಯಾಟಿಕ್‌ಗಳು ಕೆಲಸ ಮಾಡುವುದಿಲ್ಲ.
► ಮೈಗೆ ಎಳ್ಳೆಣ್ಣೆ/ಕ್ಲೋರಿನ್/ಮದ್ಯಸಾರ ಲೇಪಿಸಿಕೊಂಡರೆ ಕೊರೋನ ವೈರಸ್ ಸಾಯುತ್ತದೆ
-ಈ ಯಾವುದನ್ನ್ನೂ ಮೈಗೆ ಲೇಪಿಸಿಕೊಂಡರೂ ಅದು ಕೊರೋನ ವೈರಸ್‌ನ್ನು ಕೊಲ್ಲುವುದಿಲ್ಲ. ವಾಸ್ತವದಲ್ಲಿ ಮೈಗೆ ಕ್ಲೋರಿನ್ ಅಥವಾ ಮದ್ಯಸಾರವನ್ನು ಹಚ್ಚಿಕೊಳ್ಳುವುದರಿಂದ ಚರ್ಮಕ್ಕೆ ಹಾನಿಯಾಗಬಹುದು. ಅದರೆ ಮೇಲ್ಮೈಗಳನ್ನು ಸ್ಯಾನಿಟೈಸ್ ಮಾಡಲು ಬ್ಲೀಚ್ ಅಥವಾ ಕ್ಲೋರಿನ್ ಆಧಾರಿತ ಕ್ರಿಮಿನಾಶಕಗಳನ್ನು ಬಳಸಬಹುದು.
► ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಕೊರೋನ ವೈರಸ್ ಸೋಂಕನ್ನು ತಡೆಯಬಹುದು
-ಬೆಳ್ಳುಳ್ಳಿಯು ಸಮೃದ್ಧ ಸೂಕ್ಷ್ಮ ಜೀವಾಣು ನಿರೋಧಕ ಗುಣಗಳನ್ನು ಹೊಂದಿದೆ,ಆದರೆ ಕೊರೋನ ವೈರಸ್ ವಿರುದ್ಧ ರಕ್ಷಣೆಯನ್ನು ನೀಡುವ ಸಾಮರ್ಥ್ಯ ಹೊಂದಿದೆ ಎನ್ನುವುದಕ್ಕೆ ಯಾವುದೇ ಸಾಕ್ಷಾಧಾರವಿಲ್ಲ.
► ಮಾಂಸಾಹಾರ ಸೇವನೆಯಿಂದ ಕೊರೋನ ವೈರಸ್ ಸೋಂಕು ಉಂಟಾಗುತ್ತದೆ
-ಇದು ಕೆಲವರಲ್ಲಿ ಮನೆ ಮಾಡಿರುವ ಸುಳ್ಳು ನಂಬಿಕೆ. ಮಾಂಸಾಹಾರ ಸೇವನೆಯು ಕೊರೋನ ವೈರಸ್ ಸೋಂಕಿಗೆ ಕಾರಣವಾಗುವುದಿಲ್ಲ. ಅಲ್ಲದೆ ಆಹಾರವು ಸೋಂಕನ್ನು ಪ್ರಸಾರ ಮಾಡುತ್ತದೆ ಎನ್ನುವುದಕ್ಕೆ ಯಾವುದೇ ಸಾಕ್ಷಾಧಾರಗಳೂ ಇಲ್ಲ. ಆದರೆ ಅಡುಗೆಗೆ ಮುನ್ನ ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ತೊಳೆಯುವುದು ಅಗತ್ಯವಾಗಿದೆ. ನಿಮ್ಮ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆರೋಗ್ಯಕರ ಆಹಾರ ಸೇವನೆಗೆ ಆದ್ಯತೆ ನೀಡಿ ಮತ್ತು ವೈರಸ್ ಪಿಡುಗಿನ ಈ ಅವಧಿಯಲ್ಲಿ ಸುರಕ್ಷಿತರಾಗಿರಿ.







