ಪತಿಗೆ ಕೊರೋನ ಇರುವ ವಿಷಯ ಮುಚ್ಚಿಟ್ಟ ಗರ್ಭಿಣಿ: ಬೆಂಗಳೂರಿನ ಲೋಟಸ್ ಆಸ್ಪತ್ರೆ ಸೀಲ್ಡೌನ್
ಮಹಿಳೆಗೂ ಸೋಂಕು ದೃಢ: ವೈದ್ಯರು, ಸಿಬ್ಬಂದಿಗೆ ಕ್ವಾರಂಟೈನ್

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.16: ಡೆಲಿವರಿ ಸಮಯದಲ್ಲಿ ಮಹಿಳೆಯು ತನ್ನ ಪತಿಗೆ ಕೊರೋನ ವೈರಸ್ ಸೋಂಕು ಇರುವುದನ್ನು ಮುಚ್ಚಿಟ್ಟಿದ್ದಾರೆನ್ನಲಾಗಿದ್ದು, ಆಕೆಗೆ ಹೆರಿಗೆ ಮಾಡಿಸಿದ್ದ ನಗರದ ಕುರುಬರಹಳ್ಳಿಯಲ್ಲಿರುವ ಲೋಟಸ್ ಆಸ್ಪತ್ರೆಯನ್ನು ಗುರುವಾರ ಸೀಲ್ ಡೌನ್ ಮಾಡಲಾಗಿದೆ.
ಕೆಂಗೇರಿಯ ದೊಡ್ಡ ಬಸ್ತಿಯಿಂದ ಎ.11ರಂದು ಹೆರಿಗೆಗೆ ಎಂದು ಮಹಿಳೆಯು ಕುರುಬರ ಹಳ್ಳಿಯಲ್ಲಿರುವ ಲೋಟಸ್ ಆಸ್ಪತ್ರೆಗೆ ಬಂದಿದ್ದರು. ಅವರನ್ನು ಅಂದೇ ಆಸ್ಪತ್ರೆಗೆ ದಾಖಲಿಸಿಕೊಂಡಿದ್ದು, ರಾತ್ರಿ 11:45ಕ್ಕೆ ಸಿಜೇರಿಯನ್ ಮೂಲಕ ಡೆಲಿವರಿ ಮಾಡಿಸಲಾಗಿತ್ತು. ಈ ವೇಳೆ ಪತಿಯ ಸಹಿ ಬೇಕು ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆ ಅನುಮಾನಾಸ್ಪದವಾಗಿ ವರ್ತಿಸಿದ್ದಾರೆ ಎನ್ನಲಾಗಿದ್ದು, ವಿಚಾರ ತಿಳಿದು ಆರೋಗ್ಯಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದಾಗ, ಆಕೆಯ ಪತಿಗೆ ಕೊರೋನ ವೈರಸ್ ಸೋಂಕು ತಗುಲಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಚಾರ ಬಯಲಾಗಿದೆ.
ಕೂಡಲೇ ಮಹಿಳೆ ಮತ್ತು ಮಗುವನ್ನ ನಗರದ ಬೌರಿಂಗ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಅಲ್ಲಿ ಮಹಿಳೆಗೂ ಕೊರೋನ ಸೋಂಕು ಇರುವುದು ದೃಢಪಟ್ಟಿದೆ. ಸದ್ಯ ತಾಯಿ ಮತ್ತು ಮಗುವನ್ನು ಪ್ರತ್ಯೇಕವಾಗಿ ಇಡಲಾಗಿದೆ. 6 ದಿನದ ಮಗುವಿಗೆ ನೆಗೆಟಿವ್ ಬಂದಿದ್ದು, ಆಸ್ಪತ್ರೆಯಲ್ಲಿಯೇ ಆರೈಕೆ ಮಾಡಲಾಗುತ್ತಿದೆ. ತಾಯಿಗೆ ಕೊರೋನ ಸೋಂಕಿನ ಚಿಕಿತ್ಸೆ ನೀಡಲಾಗುತ್ತಿದೆ.
ಮತ್ತೊಂದೆಡೆ ಈ ವಿಚಾರ ತಿಳಿಯದೇ ಹೆರಿಗೆ ಮಾಡಿಸಿದ್ದ ಲೋಟಸ್ ಆಸ್ಪತ್ರೆ ಸಿಬ್ಬಂದಿ ಕೂಡ ಈಗ ಕ್ವಾರಂಟೈನ್ನಲ್ಲಿದ್ದಾರೆ. ಆಸ್ಪತ್ರೆಯ ವೈದ್ಯರು ಈಗ ಸ್ವಯಂ ನಿರ್ಬಂಧ ಹೇರಿಕೊಂಡಿದ್ದಾರೆ. ಈ ಪೈಕಿ ಸ್ಟಾಫ್ ನರ್ಸ್ ಮತ್ತು ಇತರೆ ಸಿಬ್ಬಂದಿಯನ್ನ ಆಸ್ಪತ್ರೆಯಲ್ಲಿಟ್ಟು ಕ್ವಾರಂಟೈನ್ ಮಾಡಲು ಆರೋಗ್ಯಾಧಿಕಾರಿಗಳು ಕರೆದುಕೊಂಡು ಹೋಗಿದ್ದಾರೆ. ಲೋಟಸ್ ಆಸ್ಪತ್ರೆಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿ, ಫ್ಯೂಮಿಗೇಷನ್ ಬಳಿಕ ಆಸ್ಪತ್ರೆಗೆ ಬೀಗ ಹಾಕಲಾಗಿದೆ. ಜೊತೆಗೆ ಡಾಕ್ಟರ್ ಗಳಿಗೆ ಕೊರೋನ ಟೆಸ್ಟ್ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.







