ಮಂಗಳೂರು: ಸೈಬರ್ ತಜ್ಞ ಡಾ.ಅನಂತ ಪ್ರಭು ತಂಡದಿಂದ ಕಿಟ್ ವಿತರಣೆ

ಮಂಗಳೂರು, ಎ.16: ಕೊರೋನ ಹಿನ್ನೆಲೆಯಲ್ಲಿ ಹಸಿದ ಹೊಟ್ಟೆಗಳನ್ನು ಹುಡುಕಿ ಸಿದ್ಧ ಆಹಾರದ ಜತೆಗೆ ಕಿಟ್‌ಗಳನ್ನು ಕೊಡುವ ಕಾರ್ಯವನ್ನು ಸರಕಾರದ ಜತೆಯಲ್ಲೇ ಬಹಳಷ್ಟು ಸರಕಾರೇತರ ಸಂಸ್ಥೆಗಳು, ವೈಯಕ್ತಿಕ ನೆಲೆಯಲ್ಲಿ ಹಲವು ಮಂದಿ ಮಾಡುತ್ತಿದ್ದಾರೆ. ಇಂತಹ ಹಲವು ಮಂದಿಯಲ್ಲಿ ನಗರದ ಹೆಸರಾಂತ ಸೈಬರ್ ತಜ್ಞ ಡಾ. ಅನಂತ್ ಪ್ರಭು ಹಾಗೂ ಅವರ ತಂಡ ಕೂಡಾ ಸೇರಿದೆ.
ಸೈಬರ್ ಅಪರಾಧಗಳ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಮಾರ್ಗದರ್ಶನ ನೀಡುವ ಡಾ. ಅನಂತ್ ಪ್ರಭು, ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕರು. ಲಾಕ್‌ಡೌನ್‌ನ ಆರಂಭದ ದಿನಗಳಲ್ಲಿ ತಮ್ಮ ವೈಯಕ್ತಿಕ ನೆಲೆಯಲ್ಲಿ ಸಿದ್ಧ ಆಹಾರವನ್ನು ಹಸಿದವರಿಗೆ ನೀಡುವುದು ಹಾಗೂ ದಿನಸಿ ವಸ್ತುಗಳ ಕಿಟ್‌ಗಳನ್ನು ಡಾ. ಅನಂತ್ ಪ್ರಭು ವಿತರಿಸಲಾರಂಭಿಸಿದರು. ಆದರೆ ದಿನಕಳೆದಂತೆಯೇ, ಕೂಲಿ ಕಾರ್ಮಿಕರು ಹಾಗೂ ಆರ್ಥಿಕವಾಗಿ ಯಾವುದೇ ವ್ಯವಸ್ಥೆ ಇಲ್ಲದ ಕುಟುಂಬಗಳ ಸಂಕಟ ಮುಂದುವರಿಯುದನ್ನು ಕಂಡ ಡಾ. ಅನಂತ್ ಪ್ರಭು ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ಬಗ್ಗೆ ಮನವಿಯೊಂದನ್ನು ಹಾಕಿದರು. ಅದೆಷ್ಟೋ ಕುಟುಂಬಗಳು ಸರಿಯಾಗಿ ಊಟದ ವ್ಯವಸ್ಥೆ ಇಲ್ಲದೆ ಪರದಾಡುತ್ತಿವೆ. ಕೈಲಾದವರು ಸಹಾಯ ಮಾಡಿದರೆ ಅದೆಷ್ಟೋ ಕುಟುಂಬಗಳಿಗೆ ಎರಡು ಹೊತ್ತಿನ ಊಟವನ್ನು ನೀಡಬಹುದು ಎಂಬ ಮನವಿ ಅವರದ್ದಾಗಿತ್ತು. ಫೇಸ್‌ಬುಕ್ ಖಾತೆಯಲ್ಲಿ ಸುಮಾರು 22,000 ಸ್ನೇಹಿತರನ್ನು ಹೊಂದಿರುವ ಡಾ.ಅನಂತ್ ಪ್ರಭು ಅವರ ಮನವಿಗೆ ಬಹಳಷ್ಟು ದಾನಿಗಳು ಸ್ವಯಂಪ್ರೇರಿತವಾಗಿ ಮುಂದೆ ಬಂದ ಹಿನ್ನೆಲೆಯಲ್ಲಿ ಇಂದಿನವರೆಗೆ (ಎ. 16) 325 ದಿನಸಿ ಕಿಟ್‌ಗಳನ್ನು ಡಾ. ಅನಂತ ಪ್ರಭು ಹಾಗೂ ಅವರ ತಂಡ ಅತೀ ಅಗತ್ಯವಿರುವವರಿಗೆ ಹುಡುಕಿ ವಿತರಿಸಿದೆ.
‘‘ಸಂಕಷ್ಟದ ಈ ಪರಿಸ್ಥಿತಿಯಲ್ಲಿ ಸರಕಾರ, ದಾನಿಗಳು, ಜನಪ್ರತಿನಿಧಿಗಳು ಸಾಕಷ್ಟು ರೀತಿಯಲ್ಲಿ ನೆರವು ನೀಡುತ್ತಿದ್ದಾರೆ. ಆದರೆ ನಮ್ಮ ತಂಡ ಯಾರಿಂದಲೂ ನೆರವು ಸಿಗದಂತಹ ಕುಟುಂಬಗಳನ್ನು ಹುಡುಕಿ ಕಿಟ್‌ಗಳನ್ನು ನೀಡುತ್ತಿದ್ದೇವೆ. ದಿನವೊಂದಕ್ಕೆ ತಲಾ 1,200 ರೂ. ಮೌಲ್ಯದ 25 ಕಿಟ್‌ಗಳನ್ನು ವಿತರಿಸುತ್ತೇವೆ’’ ಎನ್ನುತ್ತಾರೆ ಡಾ. ಅನಂತ್ ಪ್ರಭು.
‘‘ನಾನಾಗಲಿ, ನನ್ನ ತಂಡವಾಗಲಿ ಈ ಕಾರ್ಯ ಯಾವುದೇ ಪ್ರಚಾರದ ದೃಷ್ಟಿಯಿಂದ ಮಾಡುತ್ತಿಲ್ಲ. ನಾನು ಫೇಸ್‌ಬುಕ್‌ನಲ್ಲಿ ಹಾಕಲು ಕಾರಣ ನನ್ನ ಸ್ನೇಹಿತ ವಲಯ ಇನ್ನಷ್ಟು ಮಂದಿಯ ಸಂಕಷ್ಟಕ್ಕೆ ನೆರವಾಗಲಿ ಎಂಬ ದೃಷ್ಟಿಯಿಂದ. ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿದೆ. 100 ಕಿಟ್‌ಗಳನ್ನು ಪೂರೈಸಿ ನಾವು ನಿಲ್ಲಿಸುವ ತೀರ್ಮಾನಕ್ಕೆ ಬಂದಿದ್ದೆವು. ಆದರೆ ಲಾಕ್‌ಡೌನ್ ವಿಸ್ತರಣೆಯಾಗಿರುವುದರಿಂದ ಜನರ ಸಂಕಷ್ಟ ಮತ್ತಷ್ಟು ಉಲ್ಬಣವಾಗುತ್ತಿದೆ. ಹಾಗಾಗಿ ನೆರವು ಮುಂದುವರಿಸಲಾಗಿದೆ. ನಮ್ಮ ತಂಡ ಕಿಟ್ ಪಡೆದವರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಿಲ್ಲ. ಬದಲಾಗಿ ಕಿಟ್ ನೀಡಿದವರ ಹಾಗೂ ಕಿಟ್‌ಗಳನ್ನು ವಾಹನದಲ್ಲಿ ತುಂಬಿಸುವ ಅಥವಾ ಸಾಗಿಸುವ ಫೋಟೋವನ್ನಷ್ಟೇ ಹಾಕುತ್ತಿದ್ದೇವೆ. ನಮಗೆ ಪ್ರಚಾರದ ಅಗತ್ಯವಿಲ್ಲ. ಆದರೆ ಇದರಿಂದ ಪ್ರೇರಣೆಗೊಂಡು ಇನ್ನಷ್ಟು ಮಂದಿ ಹಸಿದವರಿಗೆ, ಅದರಲ್ಲೂ ಅತೀ ಅಗತ್ಯವಿರುವವರನ್ನು ಹುಡುಕಿ ಆಹಾರ ವಸ್ತುಗಳನ್ನು ನೀಡಬೇಕೆಂಬುದು ನಮ್ಮ ಆಶಯ’’ ಎನ್ನುತಾರೆ ಡಾ. ಅನಂತ್ ಪ್ರಭು.
ಡಾ. ಅನಂತ್ ಹಾಗೂ ಅವರ ತಂಡ ಗ್ರೂಪ್‌ಗಳ ಮೂಲಕ ಕಿಟ್‌ಗಳಿಗೆ ಬಂದ ಬೇಡಿಕೆಯನ್ನು ಪರಿಶೀಲಿಸಿ ಅಗತ್ಯವಿರುವವರಿಗೆ ದಿನಕ್ಕೆ 25 ಕಿಟ್‌ನಂತೆ ವಿತರಿಸುತ್ತಾರೆ. ಬೆಳಗ್ಗೆ 11 ಗಂಟೆಯಿಂದ ರಾತ್ರಿ 10.30ರವರೆಗೆ ಕಿಟ್‌ಗಳನ್ನು ವಿತರಿಸಲಾಗುತ್ತಿದ್ದು, ಕಿಟ್ ಒಂದಕ್ಕೆ 900 ರೂ.ನಂತೆ ತಮ್ಮ ಸ್ನೇಹಿತ ದಾನಿಗಳಿಂದ ಪಡೆಯಲಾಗುತ್ತಿದೆ. ಕಿಟ್‌ಗಳನ್ನು ಸಾಗಿಸುವ ವಾಹನದ ಇಂಧನದ ವೆಚ್ಚ ಎಲ್ಲಾ ಡಾ. ಅನಂತ್ ಅವರದ್ದೇ. ನಗರ ವ್ಯಾಪ್ತಿಯಲ್ಲಿನ ಕೆಲವೊಂದು ತೀರಾ ಗ್ರಾಮಾಂತರ ಪ್ರದೇಶಗಳಿಗೂ ಇವರ ಕಿಟ್ ರವಾನೆಯಾಗುತ್ತಿದೆ.
‘‘ಕಿಟ್‌ಗಳನ್ನು ನೀಡುವ ಸಂದರ್ಭ ನಾವು ಜೈಲ್ ಅಧೀಕ್ಷಕ ಚಂದನ್, ಉರ್ವಾ ಸ್ಟೇಷನ್ ಇನ್ಸ್‌ಪೆಕ್ಟರ್ ಅವರನ್ನೂ ಆಹ್ವಾನಿಸಿದ್ದೇವೆ. ಕಾರಣ, ನಾವು ನೀಡುವ ಕಿಟ್ ಗುಣಮಟ್ಟದ್ದು ಎಂಬುದನ್ನು ಖಾತರಿಪಡಿಸುವುದಕ್ಕಾಗಿ. ನಮ್ಮ ಕಿಟ್‌ನಲ್ಲಿ 7.5 ಕಿಲೋ ಅಕ್ಕಿ, 2 ಕಿ.ಲೋ ಗೋಧಿ ಹಿಟ್ಟು, ತಲಾ ಒಂದು ಕೆಜಿ ತೊಗರಿಬೇಳೆ ಹಾಗೂ ಉಪ್ಪು, ಒಂದು ಸ್ನಾನದ ಸೋಪು, ಪಾತ್ರೆ ತೊಳೆಯುವ ಸೋಪು, ಪೇಸ್ಟ್, 1 ಕೆಜಿ ಸಕ್ಕರೆ, ಸಾಂಬಾರು ಪುಡಿ, 1 ಲೀಟರ್ ಸನ್‌ಫ್ಲವರ್ ಆಯಿಲ್ ಹಾಗೂ ಮಕ್ಕಳಿಗಾಗಿ ಪಾರ್ಲೆ-ಜಿ ಬಿಸ್ಕೆಟ್ ಇರುತ್ತದೆ. ಕಿಟ್ ಸಾಗಿಸುವ ತಂಡದಲ್ಲಿ ಅಲ್ತಾಫ್, ಗಣೇಶ್, ಸುನಿಲ್, ರಾಕೇಶ್, ಜಾಕ್ಲಿನ್, ಮ್ಯಾಕ್ಲಿನ್ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಾರೆ. ಕಳೆದ ಐದು ದಿನಗಳಿಂದ ಮುಖ ಗವಚಗಳನ್ನೂ ಕಿಟ್ ಜತೆ ನೀಡುತ್ತಿದ್ದೇವೆ. ಆರಂಭದಲ್ಲಿ ನಾನು ವೈಯಕ್ತಿಕವಾಗಿ ಈ ಕಾರ್ಯ ಆರಂಭಿಸಿದ್ದರೂ, ಸದ್ಯ ದಾನಿಗಳಿಂದಲೇ (ಅನಾಮಿಕವಾಗಿ ಉಳಿಯಲಿಚ್ಚಿಸಿರುವ ನ್ಯಾಯಾಧೀಶರು, ಪೊಲೀಸ್ ಅಧಿಕಾರಿಗಳು ಕೂಡಾ ನಮ್ಮ ದಾನಿಗಳ ಪಟ್ಟಿಯಲಿದ್ದಾರೆ) ದೊರೆಯುವ ಕಿಟ್‌ಗಳನ್ನು ಪೂರೈಕೆ ಮಾಡುವ ಕೆಲಸವನ್ನು ಮಾತ್ರ ನಾನು ಮಾಡುತ್ತಿದ್ದೇನೆ ಎನ್ನುತ್ತಾರೆ ಡಾ. ಅನಂತ್ ಪ್ರಭು.
ರಾಜ್ಯ ಮಾತ್ರವಲ್ಲದೆ, ರಾಷ್ಟ್ರದ ವಿವಿಧ ಭಾಗಗಳಲ್ಲಿ ಪೊಲೀಸರು, ನ್ಯಾಯಾಧೀಶರು, ವಕೀಲರಿಗೆ ಸೈಬರ್ ಕ್ರೈಮ್ ಬಗ್ಗೆ ಮಾರ್ಗದರ್ಶನ, ಪಾಠ ಮಾಡುವ ಸೈಬರ್ ತಜ್ಞ ಹಾಗೂ ಅವರ ತಂಡ ಯಾವುದೇ ಪ್ರಚಾರವಿಲ್ಲದೆ ನಡೆಸುತ್ತಿರುವ ಈ ಸೇವೆ ಸಾರ್ವಜನಿಕ ವಲುದಲ್ಲಿಯೂ ಪ್ರಶಂಸೆಗೆ ಪಾತ್ರವಾಗಿದೆ.









