ಧರ್ಮದ ಆಧಾರದಲ್ಲಿ ಕೊರೋನ ಸೋಂಕಿತರ ವಿಂಗಡನೆ: ಅಂತಾರಾಷ್ಟ್ರೀಯ ಧಾರ್ಮಿಕ ಆಯೋಗ ಕಳವಳ
ಕೊರೋನ ವಿರುದ್ಧ ಹೋರಾಟಕ್ಕೆ ಧಾರ್ಮಿಕ ಬಣ್ಣ ಬಳಿಯದಿರಿ: ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗಕ್ಕೆ ಭಾರತದ ಚಾಟಿ

ಹೊಸದಿಲ್ಲಿ, ಎ.16: ಗುಜರಾತ್‌ನ ಅಹ್ಮದಾಬಾದ್ ನಗರದ ಆಸ್ಪತ್ರೆಯೊಂದರಲ್ಲಿ ಧರ್ಮದ ಆಧಾರದಲ್ಲಿ ಕೊರೋನ ವೈರಸ್ ರೋಗಿಗಳನ್ನು ಬೇರ್ಪಡಿಸಿ ಇರಿಸಲಾಗುತ್ತಿದೆಯೆಂಬ ವರದಿಗಳ ಕುರಿತು ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ ಆಯೋಗ (ಯುಎಸ್‌ಸಿಐಆರ್‌ಎಫ್) ತೀವ್ರ ಕಳವಳ ವ್ಯಕ್ತಪಡಿಸಿದೆ. ‘‘ಇಂತಹ ಕ್ರಮಗಳು, ಭಾರತದಲ್ಲಿ ಈಗ ನಡೆಯುತ್ತಿರುವ ಮುಸ್ಲಿಮರಿಗೆ ಕಳಂಕಹಚ್ಚುವ ಪ್ರಕ್ರಿಯೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಹಾಗೂ ಮುಸ್ಲಿಮರು ಕೊರೋನ ವೈರಸ್ ಹರಡುತ್ತಿದ್ದಾರೆಂಬ ಸುಳ್ಲು ವದಂತಿಗಳು ಉಲ್ಬಣಗೊಳ್ಳುವಂತೆ ಮಾಡಲಿದೆ’’ ಎಂದು ಆಯೋಗವು ಅಸಮಾಧಾನ ವ್ಯಕ್ತಪಡಿಸಿದೆ. ಅಹ್ಮದಾಬಾದ್‌ನ ಆಸ್ಪತ್ರೆಯೊಂದರಲ್ಲಿ ಹಿಂದೂ ಹಾಗೂ ಮುಸ್ಲಿಮ್ ರೋಗಿಗಳಿಗೆ ಪ್ರತ್ಯಪ್ರತ್ಯೇಕವಾಗಿ ವಾರ್ಡ್‌ಗಳನ್ನು ಸೃಷ್ಟಿಸಲಾಗಿದೆಯೆಂಬ ವರದಿಗಳ ಬಗ್ಗೆ ಆಯೋಗವು ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡಿತ್ತು .
ಆದರೆ ಆಯೋಗದ ಪ್ರತಿಕ್ರಿಯೆಯನ್ನು ಭಾರತವು ಬುಧವಾರ ಅಲ್ಲಗಳೆದಿದೆ. ಇಂದು ಈ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯೊಂದನ್ನು ನೀಡಿ, ಆಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರದ ಆಯೋಗವು ತಪ್ಪುದಾರಿಗೆಳೆಯುವಂತಹ ವರದಿಗಳನ್ನು ಪ್ರಕಟಿಸುತ್ತಿದೆಯೆಂದು ಆರೋಪಿಸಿದೆ. ಅಹ್ಮದಾಬಾದ್‌ನ ಆಸ್ಪತ್ರೆಯಲ್ಲಿ ಧರ್ಮದ ಆಧಾರದಲ್ಲಿ ಕೊರೋನ ವೈರಸ್ ರೋಗಿಗಳನ್ನು ಪ್ರತ್ಯೇಕವಾಗಿ ಇರಿಸಿಲ್ಲವೆಂದು ಸ್ಪಷ್ಟಪಡಿಸಿದೆ.
‘‘ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರದ ಕುರಿತಂತೆ ನಿರಂಕುಶಯುತವಾದ ವ್ಯಾಖ್ಯಾನವನ್ನು ನೀಡಿದ್ದ ಯುಎಸ್‌ಸಿಐಆರ್‌ಎಫ್ ಇದೀಗ ಭಾರತದಲ್ಲಿ ಕೋವಿಡ್-19ನ ಹರಡುವಿಕೆಯನ್ನು ನಿಭಾಯಿಸಲು ಅನುಸರಿಸಲಾಗುತ್ತಿರುವ ವೃತ್ತಿಪರ ವೈದ್ಯಕೀಯ ಶಿಷ್ಟಾಚಾರಗಳ ಕುರಿತು ತಪ್ಪುದಾರಿಗೆಳೆಯುವಂತಹ ವರದಿಗಳನ್ನು ಹರಡುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ನಮ್ಮ ರಾಷ್ಟ್ರೀಯ ಗುರಿಗೆ ಧಾರ್ಮಿಕ ಬಣ್ಣವನ್ನು ಬಳಿಯುವ ಹಾಗೂ ನಮ್ಮ ವಿಸ್ತೃತವಾದ ಪರಿಶ್ರಮದಿಂದ ವಿಚಲಿತಗೊಳಿಸುವುದನ್ನು ಆಯೋಗವು ನಿಲ್ಲಿಸಬೇಕೆಂದು ಅವರು ಆಗ್ರಹಿಸಿದರು. ಗುಜರಾತ್ ಸರಕಾರವು ಸ್ಪಷ್ಟೀಕರಣ ನೀಡಿರುವಂತೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಧರ್ಮದ ಆಧಾರದಲ್ಲಿ ರೋಗಿಗಳನ್ನು ಪ್ರತ್ಯೇಕವಾಗಿರಿಸಿಲ್ಲವೆಂದು ಶ್ರೀವಾಸ್ತವ ಸ್ಪಷ್ಟಪಡಿಸಿದರು.







