"ಪಡಿತರ ಸೋರಿಕೆ ಬಗ್ಗೆ ಸದ್ಯ ಚಿಂತಿಸದಿರಿ, ಎಲ್ಲರಿಗೂ ಆಹಾರ ಒದಗಿಸಿ"
ಕೇಂದ್ರಕ್ಕೆ ರಘುರಾಮ್ ರಾಜನ್, ಅಭಿಜಿತ್ ಬ್ಯಾನರ್ಜಿ, ಅಮರ್ತ್ಯಸೇನ್ ಆಗ್ರಹ

ಹೊಸದಿಲ್ಲಿ, ಎ.16: ಕೊರೋನ ವೈರಸ್ ಹಾವಳಿ ತಡೆಗೆ ದೇಶಾದ್ಯಂತ ಲಾಕ್‌ಡೌನ್ ಹೇರಿರುವ ಈ ಸಮಯದಲ್ಲಿ, ಸರಕಾರವ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಸೋರಿಕೆಯಾಗುವ ಸಾಧ್ಯತೆ ಬಗ್ಗೆ ಚಿಂತಿಸದೆ, ಪ್ರತಿಯೊಬ್ಬರಿಗೂ ಆಹಾರ ಒದಗಿಸುವ ಬಗ್ಗೆ ಗಮನಹರಿಸಬೇಕೆಂದು ಖ್ಯಾತ ಅರ್ಥಶಾಸ್ತ್ರಜ್ಞರಾದ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ ರಾಜನ್ ಹಾಗೂ ನೊಬೆಲ್ ಪುರಸ್ಕೃತರಾದ ಅಭಿಜಿತ್ ಬ್ಯಾನರ್ಜಿ, ಅಮರ್ತ್ಯ ಸೇನ್ ಪ್ರತಿಪಾದಿಸಿದ್ದಾರೆ.
‘‘ದೊಡ್ಡ ಪ್ರಮಾಣದಲ್ಲಿ ಪಡಿತರ ವಿತರಣೆ ಜಾರಿಗೊಳಿಸುವಾಗ ಸಾಕಷ್ಟು ತಪ್ಪು ಹೆಜ್ಜೆಗಳನ್ನು ಇಡುವ ಸಾಧ್ಯತೆಯಿದೆಯೆಂದು ನಾವು ಭಾರತೀಯರು ಚಿಂತಿಸುತ್ತಾ ಇರುತ್ತೇವೆ. ಆದರೆ ಕೊರೋನ ಪಿಡುಗು ಹಾಗೂ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಷ್ಟ್ರವು ಲಾಕ್‌ಡೌನ್‌ನ ಆಗಿರುವಾಗ, ಜನತೆಯ ಜೀವ ಹಾಗೂ ಜೀವನ ಎರಡೂ ಅಪಾಯದಲ್ಲಿ ಸಿಲುಕಿರುವಾಗ ಆ ಬಗ್ಗೆ ಚಿಂತಿಸುತ್ತಾ ಕೂರುವುದು ತಪ್ಪಾಗುತ್ತದೆ’’ ಎಂದು ಈ ಮೂವರು ಅರ್ಥಶಾಸ್ತ್ರರು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ದಿನ ಪತ್ರಿಕೆಗೆ ಬರೆದಿರುವ ಲೇಖನದಲ್ಲಿ ತಿಳಿಸಿದ್ದಾರೆ.
ಭಾರತೀಯ ಆಹಾರ ನಿಗಮದಲ್ಲಿ 2020ರ ಮಾರ್ಚ್‌ನಲ್ಲಿ 77 ದಶಲಕ್ಷ ಟನ್ ಆಹಾರಧಾನ್ಯ ದಾಸ್ತಾನು ಇತ್ತು, ಇದು ಅಗತ್ಯವಿರುವ ದಾಸ್ತಾನಿಗಿಂತ ಮೂರು ಪಟ್ಟು ಅಧಿಕವಾಗಿದೆ. ‘‘ರಾಷ್ಟ್ರೀಯ ತುರ್ತುಸ್ಥಿತಿಯ ಸಮಯದಲ್ಲಿ ಈಗ ಇರುವ ದಾಸ್ತಾನಿನ ಕೆಲವು ಭಾಗವನ್ನು ನೀಡುವುದು ವಿವೇಕಯುತವಾಗಿದೆ’’ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಕೇಂದ್ರ ಸರಕಾರವು ತನ್ನ ದಾಸ್ತಾನಿನ ಮೂಲಕ ಮೂರು ತಿಂಗಳುಗಳ ಅವಧಿಗೆ ಮಾತ್ರವೇ ಹೆಚ್ಚುವರಿ ಪಡಿತರವನ್ನು ವಿತರಿಸಿದರೆ ಸಾಕಾಗದು. ಯಾಕೆಂದರೆ ದೇಶದ ಅರ್ಥಿಕತೆಯು ತನ್ನ ಕಾಲ ಮೇಲೆ ನಿಂತುಕೊಳ್ಳಬೇಕಾದರೆ ಸಾಕಷ್ಟು ಸಮಯದ ಅಗತ್ಯವಿರುತ್ತದೆ. ಇದಕ್ಕಿಂತಲೂ ಮುಖ್ಯವಾಗಿ ದೇಶಾದ್ಯಂತ ಗಣನೀಯ ಸಂಖ್ಯೆಯ ಬಡವರನ್ನು ಒಂದಲ್ಲ ಒಂದು ಕಾರಣದಿಂದಾಗಿ ಪಡಿತರ ವಿತರಣಾ ವ್ಯವಸ್ಥೆಯಿಂದ ಹೊರಗಿಡಲಾಗಿದೆ. ಈಗ ಸರಕಾರ ವಿತರಿಸ ಹೊರಟಿರುವ ಹೆಚ್ಚುವರಿ ಆಹಾರಧಾನ್ಯವು ಪಡಿತರ ಚೀಟಿಯನ್ನು ಹೊಂದಿರುವರಿಗಷ್ಟೇ ದೊರೆಯಲಿದೆಯೆಂದು ಅವರು ಹೇಳಿದ್ದಾರೆ.
ಇದರ ಬದಲಿಗೆ ಸರಕಾರವು ಕನಿಷ್ಠ ಮಟ್ಟದ ಪರಿಶೀಲನೆಯೊಂದಿಗೆ ತಾತ್ಕಾಲಿಕ ಪಡಿತರ ಚೀಟಿಗಳನ್ನು ಆರು ತಿಂಗಳ ಅವಧಿಗೆ ನೀಡಬೇಕೆಂದು ಅವರು ಆಗ್ರಹಿಸಿದರು.
ಲಾಕ್‌ಡೌನ್‌ನಿಂದ ತತ್ತರಿಸಿರುವ ಜನಸಾಮಾನ್ಯರ ಹಸಿವನ್ನು ಹೋಗಲಾಡಿಸುವ ಜೊತೆಗೆ ಕೇಂದ್ರ ಸರಕಾರವು ರೈತರು ಹಾಗೂ ಅಂಗಡಿ ಮಾಲಕರು ಪ್ರಸಕ್ತ ಎದುರಿಸುತ್ತಿರುವ ಅನಿರೀಕ್ಷಿತ ಆದಾಯ ನಷ್ಟವನ್ನು ಬಗೆಹರಿಸಬೇಕೆಂದು ರಘುರಾಮ್ ರಾಜನ್, ಅಭಿಜಿತ್ ಬ್ಯಾನರ್ಜಿ ಹಾಗೂ ಅಮರ್ತ್ಯ ಸೇನ್ ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.







