ಡಬ್ಲ್ಯುಎಚ್‌ಒಗೆ ಇನ್ನೂ 1,150 ಕೋಟಿ ರೂ. ನೀಡುವುದಾಗಿ ಮೆಲಿಂಡಾ ಗೇಟ್ಸ್ ಘೋಷಣೆ
ಮೆಲಿಂಡಾ ಲಂಡನ್, ಎ. 16: ಕೋವಿಡ್-19 ಕಾಯಿಲೆಯಿಂದ ನಲುಗಿ ಜಗತ್ತು ಆರೋಗ್ಯ ಬಿಕ್ಕಟ್ಟು ಎದುರಿಸುತ್ತಿರುವಾಗ, ವಿಶ್ವ ಆರೋಗ್ಯ ಸಂಸ್ಥೆಗೆ ನೀಡಬೇಕಾದ ದೇಣಿಗೆಯನ್ನು ಅಮೆರಿಕ ರದ್ದುಪಡಿಸಿರುವುದು ಅಪಾಯಕಾರಿ ಹಾಗೂ ಅಸಂಬದ್ಧ ಕ್ರಮವಾಗಿದೆ ಎಂದು ಪರೋಪಕಾರಿ ಸಂಸ್ಥೆ ಗೇಟ್ಸ್ ಫೌಂಡೇಶನ್‌ನ ಸಹ ಸಂಸ್ಥಾಪಕಿ ಮೆಲಿಂಡಾ ಗೇಟ್ಸ್ ಬುಧವಾರ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು ಕೊರೋನವೈರಸ್ ಜೊತೆಗೆ ವ್ಯವಹರಿಸುವ ಸರಿಯಾದ ಸಂಸ್ಥೆಯಾಗಿದೆ ಎಂದು ಅವರು ನುಡಿದರು.
ಇದೇ ಸಂದರ್ಭದಲ್ಲಿ, ಕೋವಿಡ್-19 ಸಾಂಕ್ರಾಮಿಕಕ್ಕೆ ಚಿಕಿತ್ಸೆಯನ್ನು ಕಂಡುಹಿಡಿಯಲು, ಲಸಿಕೆಯನ್ನು ಅಭಿವೃದ್ಧಿಪಡಿಸಲು ಹಾಗೂ ರೋಗವನ್ನು ನಿಭಾಯಿಸಲು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನಿಂದ ಹೆಚ್ಚುವರಿಯಾಗಿ 150 ಮಿಲಿಯ ಡಾಲರ್ (ಸುಮಾರು 1,150 ಕೋಟಿ ರೂಪಾಯಿ) ನೀಡುವುದಾಗಿ ಘೋಷಿಸಿದರು.
ಕೋವಿಡ್-19 ಸಾಂಕ್ರಾಮಿಕವನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ನಿಭಾಯಿಸುವುದಕ್ಕಾಗಿ ಫೌಂಡೇಶನ್ ಈಗಾಗಲೇ 250 ಮಿಲಿಯ ಡಾಲರ್ (ಸುಮಾರು 1,920 ಕೋಟಿ ರೂಪಾಯಿ) ಒದಗಿಸಿದೆ.
ಅಮೆರಿಕದ ದೇಣಿಗೆ ಸ್ಥಗಿತ: ಡಬ್ಲುಎಚ್‌ಒ ಮುಖ್ಯಸ್ಥ ವಿಷಾದ
ಜಿನೀವ (ಸ್ವಿಟ್ಸರ್‌ಲ್ಯಾಂಡ್), ಎ. 16: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಗೆ ಅಮೆರಿಕದ ದೇಣಿಗೆಯನ್ನು ನಿಲ್ಲಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಕೊಂಡಿರುವ ನಿರ್ಧಾರಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಬುಧವಾರ ಹೇಳಿದ್ದಾರೆ. ಆದರೆ, ಈಗ ನೂತನ-ಕೊರೋನವೈರಸ್ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಜಗತ್ತು ಒಂದಾಗುವ ಕಾಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು ಚೀನಾದ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿರುವ ಟ್ರಂಪ್, ಸಂಸ್ಥೆಗೆ ಅಮೆರಿಕ ನೀಡುತ್ತಿರುವ 400 ಮಿಲಿಯ ಡಾಲರ್ (ಸುಮಾರು 3,076 ಕೋಟಿ ರೂಪಾಯಿ) ದೇಣಿಗೆಯನ್ನು ಮಂಗಳವಾರ ನಿಲ್ಲಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೇಬ್ರಿಯೇಸಸ್, ‘‘ಅಮೆರಿಕವು ಹಿಂದಿನಿಂದಲೂ ವಿಶ್ವ ಆರೋಗ್ಯ ಸಂಸ್ಥೆಯ ಉದಾರ ಮಿತ್ರನಾಗಿದೆ ಹಾಗೂ ಅದು ಅದೇ ರೀತಿಯಲ್ಲಿ ಮುಂದುವರಿಯುತ್ತದೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ’’ ಎಂದು ಹೇಳಿದರು.







