ಸದ್ಯದ ಪರಿಸ್ಥಿತಿಯಲ್ಲಿ ಹೊರಗಿನವರನ್ನು ಜಿಲ್ಲೆಗೆ ಕರೆಸಿಕೊಳ್ಳುವುದು ಅಸಾಧ್ಯ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ಎ.16: ಕೇಂದ್ರ ಹಾಗೂ ರಾಜ್ಯ ಸರಕಾರದ ಆದೇಶದಂತೆ ಸದ್ಯದ ಪರಿಸ್ಥಿತಿಯಲ್ಲಿ ಮುಂಬೈ, ಪುಣೆಯಲ್ಲಿ ಬೆಂಗಳೂರಿನಲ್ಲಿರುವ ಉಡುಪಿ ಜಿಲ್ಲೆಯ ನಾಗರಿಕರನ್ನು ಜಿಲ್ಲೆಗೆ ಕರೆಸಿಕೊಳ್ಳಲು ಸಾಧ್ಯವಿಲ್ಲ. ಯಾರೆಲ್ಲ ಎಲ್ಲೆಲ್ಲೆ ಇದ್ದರೋ ಅಲ್ಲೇ ಇರಬೇಕು ಎಂಬುದು ಸರಕಾರದ ನೀತಿಯಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಹೊರ ರಾಜ್ಯ, ಜಿಲ್ಲೆಗಳಲ್ಲಿರುವ ಉಡುಪಿಯ ಜನತೆಯ ಪರವಾಗಿ ಜಿಲ್ಲೆಯ ಶಾಸಕರು, ಸಂಸದರು ಕರೆ ಮಾಡಿ ಹೇಗಾದರೂ ಮಾಡಿ ಅವರೆನ್ನೆಲ್ಲ ಕರೆಸಿಕೊಳ್ಳುವಂತೆ ಕೋರಿಕೆ ಸಲ್ಲಿಸುತ್ತಿದ್ದಾರೆ. ಅವರಿಗೂ ಒತ್ತಡಗಳು ಬರುತ್ತಿವೆ. ಆದರೆ ಈ ಹಂತದಲ್ಲಿ ಸರಕಾರದ ಆದೇಶಕ್ಕೆ ವಿರುದ್ಧವಾಗಿ ಯಾರನ್ನು ಕೂಡ ಉಡುಪಿ ಜಿಲ್ಲೆಗೆ ಕರೆಸಿಕೊಳ್ಳುವ ಆಗುತ್ತಿಲ್ಲ. ಆದುದರಿಂದ ಎಲ್ಲರನ್ನು ನಮ್ಮನ್ನು ಕ್ಷಮಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
‘ತಾವುಗಳು ಎಲ್ಲೆಲ್ಲಿ ಇದ್ದೀರಿ. ಅಲ್ಲೇ ಆರಾಮವಾಗಿ ಇರಬೇಕು. ಲಾಕ್ ಡೌನ್ ಮುಗಿದ ನಂತರ ನಮ್ಮ ಜಿಲ್ಲೆಗೆ ಬಂದು ಬಂಧುಗಳನ್ನು ಭೇಟಿಯಾಗಬಹುದು. ಈ ಹಂತದಲ್ಲಿ ಇಲ್ಲಿಗೆ ಬಂದರೆ ಅವರಿಗೂ ತೊಂದರೆ ಇಲ್ಲಿ ಇರುವವರೆಗೂ ತೊಂದರೆಯಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.





