ಮಂಗಳೂರು: ರಿಕ್ಷಾ ಚಾಲಕರಿಗೆ ವಿಶೇಷ ಪ್ಯಾಕೇಜ್ ಒದಗಿಸಲು ಆಗ್ರಹ

ಮಂಗಳೂರು, ಎ.16: ಕೊರೋನ ಸೋಂಕು ತಡೆಗಟ್ಟುವ ಸಲುವಾಗಿ ಲಾಕ್‌ಡೌನ್ ವಿಧಿಸಲ್ಪಟ್ಟ ಬಳಿಕ ಅಂದರೆ ಕಳೆದ 20 ದಿನದಿಂದ ರಿಕ್ಷಾ ಚಾಲಕರು, ಮಾಲಕರು ‘ಬಾಡಿಗೆ’ ಮಾಡಲಾಗದೆ ತೀವ್ರ ಸಂಕಷ್ಟದಲ್ಲಿದ್ದಾರೆ. ಅವರ ಕುಟುಂಬದ ಕಲ್ಯಾಣಕ್ಕಾಗಿ ಸರಕಾರ ವಿಶೇಷ ಪ್ಯಾಕೇಜನ್ನು ಸರಕಾರ ಘೋಷಿಸುವ ಮೂಲಕ ಸರಕಾರ ರಿಕ್ಷಾ ಚಾಲಕರ ನೆರವಿಗೆ ಧಾವಿಸಬೇಕು ಎಂದು ದ.ಕ.ಜಿಲ್ಲಾ ಅಲ್ಪಸಂಖ್ಯಾತರ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಅಧ್ಯಕ್ಷ ಅಲಿ ಹಸನ್ ಆಗ್ರಹಿಸಿದ್ದಾರೆ.
ದ.ಕ.ಜಿಲ್ಲೆಯ ಮಟ್ಟಿಗೆ ಖಾಸಗಿ ಬಸ್ಸಿನಂತೆ ರಿಕ್ಷಾ ಕೂಡ ಪ್ರಮುಖ ಸಾರಿಗೆಯಾಗಿದೆ. ರಿಕ್ಷಾವನ್ನು ನಂಬಿಕೊಂಡೇ ಸಾವಿರಾರು ಮಂದಿ ತಮ್ಮ ಕುಟುಂಬವನ್ನು ಸಲಹುತ್ತಿದ್ದಾರೆ. ಆದರೆ ಸುಮಾರು 20 ದಿನದಿಂದ ರಿಕ್ಷಾ ಚಾಲಕರು ಬಾಡಿಗೆ ಮಾಡಲಾಗದೆ ಅತಂತ್ರರಾಗಿದ್ದಾರೆ. ಕೆಲವರು ಪಾಸ್ ಪಡೆದು ಬಾಡಿಗೆ ಮಾಡುತ್ತಿದ್ದರೂ ಕೂಡ ಪೊಲೀಸರು ಕೆಲವು ನೆಪವೊಡ್ಡಿ ತೊಂದರೆ ನೀಡುತ್ತಿದ್ದಾರೆ. ಇದರಿಂದ ತುರ್ತು ಸಂದರ್ಭ ರಿಕ್ಷಾ ಚಾಲಕರು ಬಾಡಿಗೆ ಮಾಡಲು ಕೂಡ ಹಿಂದೇಟು ಹಾಕುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ರಿಕ್ಷಾಗಳ ದೈನಂದಿನ ಬಾಡಿಗೆಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಹಾಗಾಗಿ ರಿಕ್ಷಾ ಚಾಲಕರ, ಮಾಲಕರ ಕುಟುಂಬ ಸಲಹಲು ಆರ್ಥಿಕ ಸಮಸ್ಯೆಯಾಗಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರ ವಿಶೇಷ ಪ್ಯಾಕೇಜ್ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.





