ನೇತ್ರಾವತಿ ಸೇತುವೆಯಲ್ಲಿ ಪತ್ತೆಯಾದ ಕಾರು: ಮಾಲಕ ಇನ್ನೂ ನಾಪತ್ತೆ, ಮುಂದುವರಿದ ಶೋಧ

ನೇತ್ರಾವತಿ ಸೇತುವೆ ಬಳಿ ಶೋಧ ಕಾರ್ಯ ( ಒಳ ಚಿತ್ರದಲ್ಲಿ ವಿಕ್ರಂ ಗಟ್ಟಿ)
ಕೊಣಾಜೆ,ಎ.16: ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನಮೊಗರು ಸಮೀಪದ ‘ಉಳ್ಳಾಲದ ನೇತ್ರಾವತಿ ಸೇತುವೆ’ಯಲ್ಲಿ ಬುಧವಾರ ರಾತ್ರಿ ಕಾರೊಂದು ಪತ್ತೆಯಾಗಿದ್ದು, ಅದರ ಮಾಲಕನಿಗಾಗಿ ಶೋಧ ಮುಂದುವರಿದಿದೆ.
ಮೂಲತಃ ಸೋಮೇಶ್ವರ ಸಮೀಪದ ಕೊಲ್ಯದ ಪ್ರಸ್ತುತ ಕೊಣಾಜೆ ಪುಳಿಂಚಾಡಿ ನಿವಾಸಿ ವಿಕ್ರಂ ಗಟ್ಟಿ ನಾಪತ್ತೆಯಾದವರು.
ಇವರ ಕಾರು ಬುಧವಾರ ರಾತ್ರಿ ಸುಮಾರು 10:30ಕ್ಕೆ ನೇತ್ರಾವತಿ ಸೇತುವೆಯಲ್ಲಿ ಪತ್ತೆಯಾಗಿದೆ. ಕಾರಿನ ಹೆಡ್ಲೈಟ್ ಉರಿಯುತ್ತಿದ್ದು, ಬಾಗಿಲು ತೆರೆದ ಸ್ಥಿತಿಯಲ್ಲಿತ್ತೆನ್ನಲಾಗಿದೆ. ಆದರೆ ಕಾರಿನ ಮಾಲಕ ವಿಕ್ರಂ ಗಟ್ಟಿ ನಾಪತ್ತೆಯಾಗಿದ್ದು ಅವರಿಗಾಗಿ ಗುರುವಾರವಿಡೀ ಶೋಧ ನಡೆಸಲಾಗಿದೆ. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಈವರೆಗೂ ಅವರ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಣಾಜೆ ಸಮೀಪದ ಪುಳಿಂಚಾಡಿ ಬಳಿ ಹೊಸ ಮನೆಯಲ್ಲಿ ವಾಸವಾಗಿದ್ದ ವಿಕ್ರಂ ಗಟ್ಟಿ ಕೊಲ್ಯದಲ್ಲಿ ಗ್ಯಾರೇಜ್ ನಡೆಸುತ್ತಿದ್ದರು. ಘಟನೆ ನಡೆದ ಸ್ಥಳಕ್ಕೆ ಕಂಕನಾಡಿ ನಗರ ಠಾಣೆಯ ಪೊಲೀಸರು ಆಗಮಿಸಿದ್ದು ಶೋಧ ಕಾರ್ಯ ಮುಂದುವರಿಸಿದ್ದಾರೆ. ನಾಪತ್ತೆಯಾದ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲ್ಯದಲ್ಲಿ ವಾಸವಾಗಿದ್ದ ವಿಕ್ರಮ್ ಗಟ್ಟಿ ಐದು ವರ್ಷಗಳ ಹಿಂದೆ ನರಿಂಗಾನ ವಿದ್ಯಾನಗರದ ಬಸ್ ಚಾಲಕ ಸತೀಶ್ ಗಟ್ಟಿಯ ಪುತ್ರಿ ಪ್ರತಿಕ್ಷಾ ಗಟ್ಟಿಯನ್ನು ವಿವಾಹವಾಗಿದ್ದರು. ಅವರಿಗೆ ನಾಲ್ಕು ವರ್ಷದ ಪುತ್ರ ಇದ್ದಾನೆ. ಒಂದೂವರೆ ವರ್ಷದ ಹಿಂದೆ ಕೊಣಾಜೆಯ ಪುಳಿಂಚಾಡಿ ಬಳಿ ಪ್ರತೀಕ್ಷಾ ಅವರ ಪಿತ್ರಾರ್ಜಿತ ಆಸ್ತಿಯಲ್ಲಿ ಮನೆ ನಿರ್ಮಿಸಿ ಅಲ್ಲೇ ಕುಟುಂಬ ಸಮೇತ ವಾಸವಾಗಿದ್ದರು. ವಿಕ್ರಂ ಗಟ್ಟಿ ನಾಪತ್ತೆಯಾಗಿರುವುದಾಗಿ ಅವರ ಸಹೋದರ ಜೀವನ್ ಗಟ್ಟಿ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ.
ಎ.15ರಂದು ರಾತ್ರಿ ಪುಳಿಂಚಾಡಿಯ ಮನೆಯಲ್ಲಿ ವಿಕ್ರಮ್ರ ಪತ್ನಿಯ ತಂದೆ, ತಾಯಿ ಹಾಗೂ ಪತ್ನಿ ಮಗು ಇದ್ದರು ಎನ್ನಲಾಗಿದೆ. 9 ಗಂಟೆಗೆ ಟಿ.ವಿ.ವೀಕ್ಷಿಸುತ್ತಿದ್ದಾಗ ದಿಢೀರನೆ ಕಾರಿನ ಬ್ಯಾಟರಿ ರೀಚಾರ್ಜ್ ಮಾಡುವ ಉದ್ದೇಶದಿಂದ ಕೊಣಾಜೆ ಪದವು ತನಕ ಹೋಗಿ ಬರುತ್ತೇನೆಂದು ಹೇಳಿ ವಿಕ್ರಂ ಮನೆಯಿಂದ ಹೊರಟಿದ್ದರೆನ್ನಲಾಗಿದೆ. ಬಳಿಕ ಮನೆ ಮಂದಿ ಕರೆ ಮಾಡಿದಾಗ ಅವರ ಮೊಬೈಲ್ ಪೋನ್ ಸ್ವಿಚ್ ಆಫ್ ಬರುತ್ತಿತ್ತು ಎಂದು ಕೊಣಾಜೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ವಿಕ್ರಂ ಗಟ್ಟಿ ನೇತ್ರಾವತಿ ಸೇತುವೆಯಲ್ಲಿ ತನ್ನ ಕಾರನ್ನು ಬಿಟ್ಟು ಮೊಬೈಲ್ ಸ್ವಿಚ್ಡ್ ಆಫ್ ಮಾಡಿರುವುದು ಸಂಶಯಕ್ಕೆ ಕಾರಣವಾಗಿದೆ. ಆದಾಗ್ಯೂ ಅವರಿಗಾಗಿ ಶೋಧ ಮುಂದುವರಿದಿದೆ.







