ಮನೆ ಕಟ್ಟಡ/ಬಾವಿ ಕಾಮಗಾರಿಗೆ ಅನುಮತಿ ನೀಡಲು ಆಗ್ರಹ
ಉಡುಪಿ, ಎ.16: ಕೊರೋನ ವೈರಸ್ ನಿಯಂತ್ರಣಕ್ಕಾಗಿ ಹೇರಲಾಗಿರುವ ಲಾಕ್‌ಡೌನ್‌ನಿಂದಾಗಿ ಅನಿವಾರ್ಯವಾಗಿ ಎಲ್ಲಾ ಕೆಲಸ ಕಾರ್ಯಗಳು ಸ್ಥಗಿತಗೊಂಡಿದ್ದು, ಆದರೆ ಉತ್ತಮ ನಿರ್ವಹಣೆಯಿಂದ ಉಡುಪಿಯಲ್ಲಿ ಪರಿಸ್ಥಿತಿ ನಿಯಂತ್ರಮದಲ್ಲಿರುವುದರಿಂದ ಕೃಷಿ ಚಟುವಟಿಕೆ ಸೇರಿದಂತೆ ಕೆಲವಾರು ಚಟುವಟಿಕೆಗಳಿಗೆ ಅನುಮತಿ ನೀಡಲು ಜಿಲ್ಲಾಡಳಿತ ಮುಂದಾಗಿರುವ ಮಾಹಿತಿ ಇದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘ ಜಿಲ್ಲಾಧಿಕಾರಿ ಸಲ್ಲಿಸಿರುವ ಮನವಿಯಲ್ಲಿ ಹೇಳಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಬಾಕಿ ಉಳಿಸಿಕೊಂಡ ಸಣ್ಣ ಮಟ್ಟದ ಹಲವು ಕೆಲಸ ಕಾರ್ಯಗಳನ್ನು - ಮನೆ-ಕಟ್ಟಡ, ಶೌಚಾಲಯ, ಬಾವಿಗಳ ಕಾಮಗಾರಿಗೆ- 3-4 ಮಂದಿ ಮೀರದಂತೆ ಸೇರಿಕೊಂಡು, ಸರಕಾರ ಹಾಗೂ ಜಿಲ್ಲಾಡಳಿತದ ನಿಯಮಾವಳಿಗೆ ಒಳಪಟ್ಟು ಕೆಲಸಗಳನ್ನು ಮಾಡಬಹುದಾಗಿದೆ. ಇದಕ್ಕಾಗಿ ಸ್ಥಳೀಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಅರ್ಜಿ ಸಲ್ಲಿಸಿ, ಅನುಮತಿ ಪತ್ರ ಪಡೆಯುವಂತಾಗಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇತ್ತೀಚೆಗೆ ಸುರಿದ ಮುಂಗಾರುಪೂರ್ವ ಮಳೆಯಿಂದ ಗ್ರಾಮೀಣ ಭಾಗದ ಜನರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಿದ ಜನತೆ ಪಾಲಿಗೆ ಇದು ಉತ್ತಮ ನಿರ್ಧಾರ. ಈ ಅನುಮತಿ ಪತ್ತವನ್ನು ನೀಡುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅದನ್ನು ಸಮೀಪದ ಪೋಲಿಸ್ ಠಾಣೆಯಲ್ಲಿ ತೋರಿಸಿ ಮುಂದುವರೆಯುವಂತೆ ಸೂಚಿಸುತಿದ್ದಾರೆ. ಆದರೆ ಪೋಲಿಸ್ ಅಧಿಕಾರಿಗಳು ಅಧಿಕೃತವಾದ ಆದೇಶ/ಮಾಹಿತಿ ತಮಗೆ ಬಂದಿಲ್ಲವಾದ್ದರಿಂದ ಆ ಅನುಮತಿ ಪತ್ರವನ್ನು ಮಾನ್ಯ ಮಾಡುವ ಬಗ್ಗೆ ತಮ್ಮ ಸಂದಿಗ್ದತೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಆದುದರಿಂದ ಜಿಲ್ಲಾಡಳಿತ ಈ ಬಗ್ಗೆ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಮನವಿಯಲ್ಲಿ ಆಗ್ರಹಿಸಿದ್ದಾರೆ.







