ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪ-ಪ್ರತ್ಯಾರೋಪ: ಸಿಐಡಿ ತನಿಖೆಗೆ ಆದೇಶ

ಪ್ರವೀಣ್ ಸೂದ್
ಬೆಂಗಳೂರು, ಎ.16: ಕೊರೋನ ವೈರಸ್ ಸಂಬಂಧ ಜಾರಿಗೊಳಿಸಿರುವ ಲಾಕ್ಡೌನ್ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಯುವಕರಿಬ್ಬರಿಂದ ಹಲ್ಲೆ ಘಟನೆಯ ಆರೋಪ-ಪ್ರತ್ಯಾರೋಪ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ತನಿಖೆಗೆ ಆದೇಶ ಹೊರಡಿಸಿದ್ದು, ಸಂಜಯನಗರ ಠಾಣಾ ಪೊಲೀಸ್ ಅಧಿಕಾರಿಗಳು ನೀಡಿರುವ ದೂರಿನ ಮೇಲೆ ದಾಖಲಾಗಿದ್ದು, ಮೂರು ಪ್ರಕರಣಗಳನ್ನು (ಮೊಕದ್ದಮೆ ಸಂಖ್ಯೆ 43/2020, 44 ಮತ್ತು 45) ತನಿಖೆ ನಡೆಸಲು ಸಿಐಡಿಗೆ ಹಸ್ತಾಂತರಿಸಿದ್ದಾರೆ.
ಪೊಲೀಸರ ಮೇಲೆ ಆರೋಪ: ಇಲ್ಲಿನ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭೂಪಸಂದ್ರ ಚೆಕ್ ಪೋಸ್ಟ್ ಬಳಿ ತಾಜುದ್ದೀನ್, ಕುತುಬುದ್ದೀನ್ ಎಂಬವರು ಇಬ್ಬರು ಪೊಲೀಸ್ ಪೇದೆಗಳ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾದ ವಿಡಿಯೊ ಆಧಾರದ ಮೇಲೆ ಇಬ್ಬರನ್ನು ಬಂಧಿಸಲಾಗಿತ್ತು. ಆದರೆ, ಮತ್ತೊಂದು ವಿಡಿಯೊದಲ್ಲಿ ಪೇದೆಗಳೇ ಮೊದಲಿಗೆ ಯುವಕರ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರಿಂದ, ಈ ಪ್ರಕರಣದ ತನಿಖೆ ಗಂಭೀರ ಸ್ವರೂಪ ಪಡೆದುಕೊಂಡಿದೆ.







