ಕೊರೋನ: ದೇಶದಲ್ಲಿ ಪ್ರತಿ 24 ಸ್ಯಾಂಪಲ್ ಪೈಕಿ ಒಂದು ಪಾಸಿಟಿವ್
![ಕೊರೋನ: ದೇಶದಲ್ಲಿ ಪ್ರತಿ 24 ಸ್ಯಾಂಪಲ್ ಪೈಕಿ ಒಂದು ಪಾಸಿಟಿವ್ ಕೊರೋನ: ದೇಶದಲ್ಲಿ ಪ್ರತಿ 24 ಸ್ಯಾಂಪಲ್ ಪೈಕಿ ಒಂದು ಪಾಸಿಟಿವ್](https://www.varthabharati.in/sites/default/files/images/articles/2020/04/17/240395-1587094632.gif)
ಹೊಸದಿಲ್ಲಿ, ಎ.17: ಭಾರತದಲ್ಲಿ ಕೋವಿಡ್-19 ಪರೀಕ್ಷೆ ನಡೆಸಿದ ಪ್ರತಿ 24 ಸ್ಯಾಂಪಲ್ಗಳ ಪೈಕಿ ಒಂದು ಪ್ರಕರಣ ದೃಢಪಟ್ಟಿದ್ದು, ಇದು ಜಪಾನ್, ಇಟೆಲಿ, ಅಮೆರಿಕ ಹಾಗೂ ಬ್ರಿಟನ್ಗೆ ಹೋಲಿಸಿದರೆ ತೀರಾ ಧನಾತ್ಮಕ ಅನುಪಾತ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಟಿಸಿದೆ.
ಒಟ್ಟು ಪರೀಕ್ಷೆಗೆ ಒಳಪಡಿಸಿದ ಸ್ಯಾಂಪಲ್ಗಳ ಪೈಕಿ ಜಪಾನ್ನಲ್ಲಿ ಗರಿಷ್ಠ ಅಂದರೆ ಪ್ರತಿ 11.7 ಸ್ಯಾಂಪಲ್ ಪೈಕಿ ಒಂದು ಧನಾತ್ಮಕ ಫಲಿತಾಂಶ ಬಂದಿದೆ. ಇಟೆಲಿಯಲ್ಲಿ 6.7, ಅಮೆರಿಕದಲ್ಲಿ 5.3 ಹಾಗೂ ಬ್ರಿಟನ್ನಲ್ಲಿ 3.4 ಸ್ಯಾಂಪಲ್ ಪೈಕಿ ಒಂದು ಧನಾತ್ಮಕ ಫಲಿತಾಂಶ ಬಂದಿದೆ ಎಂದು ಐಸಿಎಂಆರ್ನ ಮುಖ್ಯ ಸಾಂಕ್ರಾಮಿಕ ರೋಗಗಳ ಅಧಿಕಾರಿ ಡಾ.ಆರ್.ಆರ್.ಗಂಗಖೇಡಕರ್ ಹೇಳಿದ್ದಾರೆ.
ಭಾರತದ ಜನಸಂಖ್ಯೆ ಅಧಿಕ ಇರುವುದರಿಂದ, ಪ್ರತಿ ಗುಂಪು ಕೂಡಾ ರೋಗಕ್ಕೆ ತುತ್ತಾಗುವ ಸಾಧ್ಯತೆ ಕಡಿಮೆ. ಆದ್ದರಿಂದ ಪ್ರತಿ 24 ಸ್ಯಾಂಪಲ್ಗಳ ಪೈಕಿ 23 ನೆಗೆಟಿವ್ ಫಲಿತಾಂಶಗಳು ಬರುತ್ತಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಭಾರತದಲ್ಲಿ ತೀರಾ ಕಡಿಮೆ ಪ್ರಮಾಣದಲ್ಲಿ ಕೊರೋನ ಪರೀಕ್ಷೆ ನಡೆಯುತ್ತಿರುವುದರಿಂದ ಬಹಳಷ್ಟು ಸಂಖ್ಯೆಯ ಪ್ರಕರಣಗಳು ಬೆಳಕಿಗೆ ಬಾರದಿರುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿಕೆ ನೀಡಿದ ಬೆನ್ನಲ್ಲೇ ಆರೋಗ್ಯ ಸಚಿವಾಲಯ ಈ ಅಂಕಿ ಅಂಶ ಪ್ರಕಟಿಸಿದೆ.
ಸದ್ಯ ಭಾರತದಲ್ಲಿ ಜಾರಿಯಲ್ಲಿರುವ ರೂಢಿಯಂತೆ ಕೊರೋನ ರೋಗಲಕ್ಷಣ ಕಂಡುಬಂದ ಮತ್ತು ತೀವ್ರತರ ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದ ಪ್ರಕರಣಗಳನ್ನಷ್ಟೇ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದರ ಜತೆಗೆ ಸರ್ಕಾರ ಕ್ಷಿಪ್ರ ಆ್ಯಂಟಿಬಾಡಿ ಪರೀಕ್ಷೆಗಳನ್ನು ಕೂಡಾ ಹಾಟ್ಸ್ಪಾಟ್ಗಳಲ್ಲಿ ನಡೆಸುತ್ತಿದೆ. ಯಾವುದೇ ಪ್ರಕರಣಗಳು ಪತ್ತೆಯಾಗದ ಸ್ಥಳಗಳಲ್ಲೂ ಆರ್ಟಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಯಾವ ಧನಾತ್ಮಕ ಪ್ರಕರಣವೂ ಗಮನಕ್ಕೆ ಬಾರದಂತಾಗಬಾರದು ಎಂಬ ಬಗ್ಗೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಸ್ಪಷ್ಟಪಡಿಸಿದ್ದಾರೆ.