ಲಾಕ್‌ಡೌನ್ ನಡುವೆಯೂ ಅಂಚೆ ಮುಖಾಂತರ ಮನೆಬಾಗಿಲಿಗೆ ಮಾವು!
ಕರ್ನಾಟಕ ಸರಕಾರದಿಂದ ವಿನೂತನ ಪ್ರಯತ್ನ

ಬೆಂಗಳೂರು, ಎ.17: ಕೋವಿಡ್-19 ಸಾಂಕ್ರಾಮಿಕ ವಿರುದ್ಧದ ಹೋರಾಟದ ಅಂಗವಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಯಲ್ಲಿದ್ದರೂ, ಮಾವುಪ್ರಿಯರಿಗೆ ಕರ್ನಾಟಕ ಸರ್ಕಾರ ಸಿಹಿ ಸುದ್ದಿ ನೀಡಿದೆ. ಆನ್‌ಲೈನ್‌ನಲ್ಲಿ ಮಾವು ಖರೀದಿಗೆ ಆರ್ಡರ್ ಮಾಡಿದರೆ, ಅಂಚೆ ಮೂಲಕ ನಿಮ್ಮ ಮನೆಬಾಗಿಲಿಗೆ ಪೂರೈಸುವ ವಿನೂತನ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ.
ಕಳೆದ 48 ಗಂಟೆಗಳಲ್ಲಿ ಆನ್‌ಲೈನ್ ಮಾರ್ಕೆಟಿಂಗ್ ಮತ್ತು ಭಾರತೀಯ ಅಂಚೆ ವ್ಯವಸ್ಥೆಯನ್ನು ಬಳಸಿಕೊಂಡು, ರಾಮನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಗ್ರಾಹಕರ ಮನೆಬಾಗಿಲಿಗೆ ಮಾವು ಪೂರೈಸಲಾಗುತ್ತಿದೆ.
ಗ್ರಾಹಕರು www.karsirimangoes.karnataka.gov.in ಗೆ ಭೇಟಿ ನೀಡಿ ಮಾವು ಖರೀದಿಗೆ ಆರ್ಡರ್ ಮಾಡಬೇಕು. ಇದನ್ನು ಅಂಚೆ ಇಲಾಖೆ ಸ್ವೀಕರಿಸಿ, ಮನೆಗೆ ರವಾನಿಸುವ ವ್ಯವಸ್ಥೆ ಮಾಡುತ್ತದೆ. ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸುಮಾರು 9 ಮೆಟ್ರಿಕ್ ಟನ್ ಮಾವು ಕರ್ನಾಟಕ ಮಾರುಕಟ್ಟೆಗೆ ಬರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರ, ಮಾವು ವಿತರಿಸುವ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯಗೊಳಿಸಿದ್ದು, ಪಾರ್ಸೆಲ್ ವಿತರಿಸುವ ಮುನ್ನ ಸ್ಯಾನಿಟೈಸೇಷನ್ ಮಾಡಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಮಂಡಳಿ ಈ ಸೌಲಭ್ಯ ಕಲ್ಪಿಸಿದೆ ಎಂದು ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಹೇಳಿದ್ದಾರೆ. ಪಕ್ಕದ ಅಂಚೆ ಕಚೇರಿಗೆ ಮಾವಿನಹಣ್ಣು ತಲುಪಿದ ಬಳಿಕ ಸ್ಯಾನಿಟೈಸ್ ಮಾಡಿ ಪ್ಯಾಕ್ ಮಾಡಲಾಗುತ್ತದೆ. ಬಾದಾಮಿ ಹಣ್ಣಿಗೆ ಕೆಜಿಗೆ 179 ರೂ. ದರ ನಿಗದಿಪಡಿಸಲಾಗಿದೆ. ಪ್ರತಿ ಪಾರ್ಸೆಲ್‌ನಲ್ಲಿ 12 ಹಣ್ಣುಗಳಿದ್ದು, 3 ಕೆ.ಜಿ. ತೂಕ ಇರುತ್ತದೆ. ಅಂಚೆ ಇಲಾಖೆ 81 ರೂ. ಪಾರ್ಸೆಲ್ ದರ ವಿಧಿಸುತ್ತದೆ. ಈಗಾಗಲೇ 800 ಆರ್ಡರ್ ಬಂದಿದ್ದು, 750 ಮಂದಿಗೆ ಶುಕ್ರವಾರ ವಿತರಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.







