ದ.ಕ. ಜಿಲ್ಲೆಯಲ್ಲಿ ಮತ್ತೊಂದು ಕೊರೋನ ಪಾಸಿಟಿವ್
ಉಪ್ಪಿನಂಗಡಿಯ ವ್ಯಕ್ತಿಯಲ್ಲಿ ಸೋಂಕು ದೃಢ

ಮಂಗಳೂರು, ಎ.17: ಉಪ್ಪಿನಂಗಡಿ ವ್ಯಕ್ತಿಯೊಬ್ಬರಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟನೆ ತಿಳಿಸಿದೆ.
ಇದರೊಂದಿಗೆ 12 ದಿನಗಳ ಬಳಿಕ ದ.ಕ. ಜಿಲ್ಲೆಯಲ್ಲಿ ಮತ್ತೊಂದು ಕೊರೋನ ಪ್ರಕರಣ ಪತ್ತೆಯಾದಂತಾಗಿದೆ. ಜಿಲ್ಲೆಯಲ್ಲಿ ಕೊರೋನ ದೃಢಪಟ್ಟ 13ನೇ ಪ್ರಕರಣ ಇದಾಗಿದೆ.
ಇತ್ತೀಚೆಗೆ ದಿಲ್ಲಿಗೆ ಪ್ರಯಾಣ ಬೆಳೆಸಿರುವ ಹಿನ್ನೆಲೆ ಹೊಂದಿರುವ 39 ವರ್ಷದ ಈ ವ್ಯಕ್ತಿಯನ್ನು 14 ದಿನಗಳ ಕ್ವಾರಂಟೈನ್‌ಗಾಗಿ ಜಿಲ್ಲಾಡಳತವು ಎಪ್ರಿಲ್ 1ರಿಂದ ಕ್ವಾರಂಟೈನ್ ಕೇಂದ್ರದಲ್ಲಿರಿಸಿದೆ. ಎ.2ರಂದು ಇವರ ಗಂಟಲ ದ್ರವದ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ನೆಗಟಿವ್ ಬಂದಿತ್ತು. ಎರಡನೇ ಬಾರಿಗೆ ಎ.13ರಂದು ಅವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಇದೀಗ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ಕೊರೋನ ದೃಢಪಟ್ಟು ಚಿಕಿತ್ಸೆಯಲ್ಲಿದ್ದ 13 ಮಂದಿಯ ಪೈಕಿ ಒಂಬತ್ತು ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ





