ಉಪ್ಪಿನಂಗಡಿಯ ವ್ಯಕ್ತಿಗೆ ಕೊರೋನ; ಸರಕಾರದ ನಿರ್ಲಕ್ಷ್ಯವೇ ಕಾರಣ: ಯು.ಟಿ.ತೌಸೀಫ್
ಉಪ್ಪಿನಂಗಡಿ, ಎ.17: ಇಲ್ಲಿನ ವ್ಯಕ್ತಿಯೊಬ್ಬರಿಗೆ ಕೊರೋನ ‘ಪಾಸಿಟಿವ್’ ಬಂದಿದೆ ಎಂಬ ಮಾಹಿತಿಯಿದೆ. ಆತನಿಗೆ ಈ ಸೋಂಕು ತಗುಲಿದ್ದರೆ ಆದಲ್ಲಿ ಅದಕ್ಕೆ ಸರಕಾರದ ನಿರ್ಲಕ್ಷ್ಯವೇ ಕಾರಣ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ.ತೌಸೀಫ್ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ದಿಲ್ಲಿಗೆ ಹೋಗಿ ಬಂದಿದ್ದ ಈ ಯುವಕನನ್ನು ಮುಂಜಾಗೃತ ಕ್ರಮವಾಗಿ ಸರಕಾರ ದೇರಳಕಟ್ಟೆಯ ಫ್ಲಾಟ್‌ವೊಂದರಲ್ಲಿ ಕೊರಂಟೈನ್‌ನಲ್ಲಿಟ್ಟಿತ್ತು. ಆದರೆ ಈ ಒಂದೇ ಫ್ಲಾಟ್‌ನಲ್ಲಿ ಹಲವರಿದ್ದು, ಉಪ್ಪಿನಂಗಡಿಯ ವ್ಯಕ್ತಿಯಿದ್ದ ರೂಂನಲ್ಲೂ ಇಬ್ಬರಿದ್ದರು ಮತ್ತು ಒಂದೇ ಸ್ನಾನಗೃಹ, ಶೌಚಾಲಯ ಉಪಯೋಗಿಸುತ್ತಿದ್ದರಂತೆ. ಈ ಬಗ್ಗೆ ಆಕ್ಷೇಪಿಸಿದ್ದ ಆ ವ್ಯಕ್ತಿ, ‘ಬೇರೆಯವರಿಂದ ನನಗೆ ಕೊರೋನ ಹರಡುವ ಸಾಧ್ಯತೆಯಿದೆ. ಆದ್ದರಿಂದ ನನ್ನನ್ನು ಪ್ರತ್ಯೇಕ ರೂಂಗೆ ಸ್ಥಳಾಂತರಿಸಬೇಕು’’ ಎಂದು ಜಿಲ್ಲಾಧಿಕಾರಿ, ಡಿವೈಎಸ್ಪಿಯವರಿಗೆ ಮನವಿ ಮಾಡಿದ್ದಾಗಿ ನನಗೆ ತಿಳಿಸಿದ್ದರು. ಉಪ್ಪಿನಂಗಡಿಯ ವ್ಯಕ್ತಿಯ ರೂಂನಲ್ಲಿದ್ದ ಮತ್ತೋರ್ವ ವ್ಯಕ್ತಿಗೆ ಕೆಲ ದಿನಗಳ ಹಿಂದೆಯೇ ಕೊರೋನ ಪಾಸಿಟಿವ್ ಬಂದಿತ್ತು. ಆ ಸಂದರ್ಭ ಉಪ್ಪಿನಂಗಡಿ ವ್ಯಕ್ತಿಯ ಗಂಟಲ ದ್ರವ ಪರೀಕ್ಷೆಯ ವರದಿಯಲ್ಲಿ ಕೊರೋನ ನೆಗೆಟಿವ್ ಕಾಣಿಸಿಕೊಂಡಿತ್ತು. ಇದೀಗ ಅವರ ಗಂಟಲ ದ್ರವ ಪರೀಕ್ಷೆ ವರದಿಯಲ್ಲಿ ಕೊರೋನ ಪಾಸಿಟಿವ್ ಬಂದಿರುವುದಾಗಿ ಜಿಲ್ಲಾಡಳಿತ ತಿಳಿಸಿದೆ. ಇದಕ್ಕೆ ಸರಕಾರದ ನಿರ್ಲಕ್ಷ್ಯವೇ ಕಾರಣ. ಶಂಕಿತ ಕೊರೋನ ಸೋಂಕಿತರನ್ನು ಒಟ್ಟಾಗಿ ಇಡದೇ ಅಂತರ ಪಾಲಿಸಬೇಕಿತ್ತು. ಆದರೆ ಸರಕಾರ ಈ ರೀತಿ ಮಾಡಿಲ್ಲ. ಇದನ್ನು ತಾನು ತೀವ್ರವಾಗಿ ಖಂಡಿಸುವುದಾಗಿ ಯು.ಟಿ. ತೌಸೀಫ್ ತಿಳಿಸಿದ್ದಾರೆ.





