ಶಿವಮೊಗ್ಗದಲ್ಲಿ ದಿಢೀರ್ ಕಾರ್ಯಾಚರಣೆ: ಅನಾವಶ್ಯಕವಾಗಿ ರಸ್ತೆಗಿಳಿದವರಿಗೆ ಬಿಸಿ ಮುಟ್ಟಿಸಿದ ಡಿಸಿ, ಎಸ್ಪಿ

ಶಿವಮೊಗ್ಗ, ಎ.17: ಕೊರೋನ ವೈರಸ್ ಸೋಂಕು ಹಿನ್ನೆಲೆಯಲ್ಲಿ ನಗರದಲ್ಲಿ ರಸ್ತೆ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರೂ, ಅನಾವಶ್ಯಕವಾಗಿ ರಸ್ತೆಗಿಳಿದಿದ್ದ ವಾಹನ ಸವಾರರಿಗೆ ಸ್ವತಃ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಕ್ರವಾರ ಬಿಸಿ ಮುಟ್ಟಿಸಿದ್ದಾರೆ.
ಅಲ್ಕೋಳಾ ಸರ್ಕಲ್‍ನಲ್ಲಿ ದಿಢೀರ್ ತಪಾಸಣೆ ಆರಂಭಿಸಿದ ಜಿಲ್ಲಾಧಿಕಾರಿ ಹಾಗೂ ಎಸ್ಪಿ, ಪ್ರತಿಯೊಂದು ವಾಹನವನ್ನು ನಿಲ್ಲಿಸಿ ಮನೆ ಬಿಟ್ಟು ಹೊರಗೆ ಬಂದಿರುವುದರ ಉದ್ದೇಶ ಪ್ರಶ್ನಿಸಿದರು.
ಆಸ್ಪತ್ರೆ, ಮೆಡಿಕಲ್, ಕೃಷಿ ಚಟುವಟಿಕೆ, ಸ್ಥಳೀಯವಾಗಿ ಸಾಮಗ್ರಿಗಳ ಖರೀದಿಯಂತಹ ಅತ್ಯವಶ್ಯಕ ಕೆಲಸಗಳಿಗೆ ಬಂದಿರುವವರಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಯಿತು. ಹಾಲಿನ ವಾಹನಗಳು, ಗೂಡ್ಸ್ ವಾಹನಗಳಿಗೆ ಸಂಚರಿಸಲು ಬಿಡಲಾಯಿತು. ಅನಾವಶ್ಯಕವಾಗಿ ಹೊರಗೆ ಬಂದಂತವರ ವಾಹನಗಳನ್ನು ಜಪ್ತಿ ಮಾಡಿ ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಶಿವಮೊಗ್ಗ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೊರೋನ ವೈರಸ್ ಪ್ರಕರಣ ದಾಖಲಾಗಿಲ್ಲ ಎಂದರೆ ಸಂಚಾರ ನಿರ್ಬಂಧದಲ್ಲಿ ಸಡಿಲಿಕೆ ಮಾಡಲಾಗಿದೆ ಎಂದರ್ಥವಲ್ಲ. ಜನರು ತಮ್ಮ ಮನೆ ಬಳಿ ಇರುವ ಅಂಗಡಿಗಳಿಂದ ಮಾತ್ರ ಸಾಮಗ್ರಿಗಳನ್ನು ಖರೀದಿಸಬೇಕು. ನಗರದೆಲ್ಲೆಡೆ ತಿರುಗಾಡಲು ಯಾರಿಗೂ ಅವಕಾಶವಿಲ್ಲ. ಆಸ್ಪತ್ರೆಗೆ ಬರುವವರು ಕುಟುಂಬದ ಇತರ ಸದಸ್ಯರನ್ನು ಕರೆ ತರಬಾರದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಅನಾವಶ್ಯಕವಾಗಿ ಹೊರಗೆ ಬರುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಪ್ರತಿ ದಿನ ತಾಲೂಕುಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ ಎಂದರು.
ವಾಹನಗಳನ್ನು ಸೀಮಿತ ಉದ್ದೇಶಕ್ಕಾಗಿ ಮಾತ್ರ ರಸ್ತೆಗಿಳಿಸಬಹುದಾಗಿದೆ. ಅನಾವಶ್ಯಕವಾಗಿ ಓಡಾಡುವ ವಾಹನಗಳನ್ನು ಮುಟ್ಟುಗೋಲು ಹಾಕಲು ಸೂಚಿಸಲಾಗಿದ್ದು, ಜಿಲ್ಲೆಯಾದ್ಯಂತ ಲಾಕ್‍ಡೌನ್ ಕಟ್ಟುನಿಟ್ಟಿನಿಂದ ಜಾರಿಗೊಳಿಸಲು ಸೂಚನೆ ನೀಡಲಾಗಿದೆ ಎಂದು ಎಸ್ಪಿ ಕೆ.ಎಂ.ಶಾಂತರಾಜು ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಉಪಸ್ಥಿತರಿದ್ದರು.








