ಕೊರೋನ ವಿರುದ್ಧದ ಹೋರಾಟ: ನರ್ಸ್ ಆಗಿ ಆಸ್ಪತ್ರೆಯಲ್ಲಿ ಕೆಲಸ ಆರಂಭಿಸಿದ ರಾಜಕುಮಾರಿ

ಸ್ಟಾಕ್ ಹೋಂ: ಸ್ವೀಡನ್ ದೇಶದ ರಾಜಕುಮಾರಿ ಸೋಫಿಯಾ ಅವರು ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯಕೀಯ ಸಿಬ್ಬಂದಿಗೆ ನೆರವಾಗಲು ದೇಶದ ಆಸ್ಪತ್ರೆಯೊಂದರಲ್ಲಿ ಕೆಲಸ ಆರಂಭಿಸಿದ್ದಾರೆ.
ಮೂವತ್ತೈದು ವರ್ಷದ ಸೋಫಿಯಾ ಅವರು ರಾಜಕುಮಾರ ಕಾರ್ಲ್ ಫಿಲಿಪ್ ಅವರ ಪತ್ನಿಯಾಗಿದ್ದಾರೆ ಹಾಗೂ ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ಸ್ಟಾಕ್ ಹೋಂನ ಸೋಫಿಯಾಮ್ಮೆಟ್ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಮೂರು ದಿನಗಳ ಮೆಡಿಕಲ್ ಕೋರ್ಸ್ ಅನ್ನು ಅವರು ಪೂರೈಸಿದ್ದಾರೆ. ಇದೇ ಆಸ್ಪತ್ರೆಯ ಗೌರವ ಸದಸ್ಯೆಯೂ ಅವರಾಗಿದ್ದಾರೆ.
ಸ್ವೀಡನ್ ದೇಶದಲ್ಲಿ ಈಗಾಗಲೇ 11,927 ಮಂದಿ ಕೊರೋನ ಪೀಡಿತರಾಗಿದ್ದು, ಈ ಸೋಂಕು ದೇಶದಲ್ಲಿ 1,203 ಮಂದಿಯನ್ನು ಬಲಿ ಪಡೆದಿದೆ. ಇದೀಗ ಆಕೆ ವೈದ್ಯಕೀಯ ಸಿಬ್ಬಂದಿಗೆ ಕೊರೋನ ಸೋಂಕಿತರ ಚಿಕಿತ್ಸೆಗೆ ನೆರವಾಗಲಿದ್ದಾರೆ. ಆಸ್ಪತ್ರೆಯಲ್ಲಿ ಇತರ ಸಿಬ್ಬಂದಿಯೊಂದಿಗೆ ಸೋಫಿಯಾ ನಿಂತಿರುವ ಚಿತ್ರಗಳು ಹಲವರ ಗಮನ ಸೆಳೆದಿವೆ.
ಹೆಚ್ಚುತ್ತಿರುವ ಕೊರೋನ ಪ್ರಕರಣಗಳಿಂದಾಗಿ ದೇಶದ ವೈದ್ಯಕೀಯ ಕ್ಷೇತ್ರ ಒತ್ತಡದಲ್ಲಿರುವುದರಿಂದ ಸ್ವಯಂಪ್ರೇರಿತರಾಗಿ ಸೇವೆ ನೀಡಲು ರಾಜಕುಮಾರಿ ಮುಂದೆ ಬಂದಿದ್ದಾರೆ. ವಿವಾಹವಾಗುವ ಮೊದಲು ಆಕೆ ಮಾಡೆಲ್ ಆಗಿದ್ದರು.







