ಲಾಕ್ ಡೌನ್ ನಡುವೆ ನಿಖಿಲ್ ಕುಮಾರಸ್ವಾಮಿ ವಿವಾಹ: ಸುರಕ್ಷಿತ ಅಂತರ ಉಲ್ಲಂಘನೆ
ತಪ್ಪು ನಡೆದಿದ್ದರೆ ಕಠಿಣ ಕ್ರಮ: ಡಿಸಿಎಂ

ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ 28 ಕಿ.ಮೀ. ದೂರದ ರಾಮನಗರದಲ್ಲಿನ ತೋಟದ ಮನೆಯಲ್ಲಿ ನಡೆದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ - ರೇವತಿ ವಿವಾಹ ದೇಶಾದ್ಯಂತ ಸುದ್ದಿ ಮಾಡಿದೆ. ಲಾಕ್ ಡೌನ್ ನಡುವೆ ನಡೆದ ಈ ವಿಐಪಿ ವಿವಾಹ ಸಮಾರಂಭದಲ್ಲಿ ಸುರಕ್ಷಿತ ಅಂತರ ಕಂಡುಬಂದಿಲ್ಲ, ಅಷ್ಟೇ ಏಕೆ, ಮುಖಕ್ಕೆ ಮಾಸ್ಕ್ ಧರಿಸಿದವರೂ ಕಂಡಿಲ್ಲ.
ವಿವಾಹ ಸಮಾರಂಭದಲ್ಲಿ ಎರಡೂ ಕುಟುಂಬಗಳ ಸದಸ್ಯರ ಹೊರತಾಗಿ ಯಾರೂ ಹೊರಗಿನವರು ಭಾಗವಹಿಸುವುದಿಲ್ಲ ಹಾಗೂ ಕೇವಲ 60ರಿಂದ 70 ಮಂದಿ ಭಾಗವಹಿಸುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದರು. ಆದರೆ ಇಂದು ನಡೆದ ವಿವಾಹ ಸಮಾರಂಭದಲ್ಲಿ 100ಕ್ಕೂ ಅಧಿಕ ಮಂದಿಯಿದ್ದರು ಎಂದು ಆರೋಪಿಸಲಾಗಿದೆ.
ರಾಜ್ಯ ಪೊಲೀಸರ ಪ್ರಕಾರ 42 ವಾಹನಗಳು ಹಾಗೂ 120 ಜನರಿಗೆ ಪಾಸ್ ನೀಡಲಾಗಿತ್ತು. ದೊಡ್ಡ ಮಟ್ಟದ ಅದ್ದೂರಿ ವಿವಾಹದಂತೆ ಡ್ರೋನ್ ಮೂಲಕ ತೆಗೆದ ಚಿತ್ರಗಳಲ್ಲಿ ಕಾಣಿಸದೇ ಇದ್ದರೂ ಸುರಕ್ಷಿತ ಅಂತರ ನಿಯಮವನ್ನು ಯಾರೂ ಪಾಲಿಸಿಲ್ಲ ಎಂಬುದು ಸ್ಪಷ್ಟ.
ಕೊರೋನ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಇದ್ದರೂ ವಿವಾಹವನ್ನು ಮುಂದೂಡಲು ನಿರಾಕರಿಸಿದ್ದ ಕುಮಾರಸ್ವಾಮಿ ವೈದ್ಯರ ಸಲಹೆ ಸೂಚನೆಗಳನ್ನು ಪಡೆದೇ ವಿವಾಹ ನಡೆಸಲು ತೀರ್ಮಾನಿಸಿದ್ದಾಗಿ ತಿಳಿಸಿದ್ದಾರೆ.
ವಿವಾಹ ಸಮಾರಂಭದಲ್ಲಿ ಸೂಚಿಸಲಾದ ಮಾರ್ಗಸೂಚಿಸಿ ಅನುಸರಿಸಿಲ್ಲ ಎಂದು ತಿಳಿದು ಬಂದರೆ ಮಾಜಿ ಸಿಎಂ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹೇಳಿದ್ದಾರೆ.
“ನಾವು ಈ ರೀತಿ ಪರಿಸ್ಥಿತಿ ನಿಭಾಯಿಸಿದರೆ ಅದು ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಉಲ್ಲಂಘಕರು ಯಾರೇ ಇರಲಿ ಕ್ರಮ ಕೈಗೊಳ್ಳುತ್ತೇವೆ. ನಾವು ಕ್ರಮ ಕೈಗೊಳ್ಳಬೇಕಿದೆ, ಇಲ್ಲದೇ ಇದ್ದರೆ ವ್ಯವಸ್ಥೆಯನ್ನೇ ಅಣಕಿಸಿದಂತೆ'' ಎಂದು ಅವರು ತಿಳಿಸಿದ್ದಾರೆ.







