ಕೊರೋನ ಸೋಂಕಿನಿಂದ ಗುಣಮುಖ: ವೆನ್ಲಾಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 3 ಮಂದಿ ಬಿಡುಗಡೆ

ಸಾಂದರ್ಭಿಕ ಚಿತ್ರ
ಮಂಗಳೂರು, ಎ.17: ಕೊರೋನ ಸೋಂಕಿಗೊಳಗಾಗಿ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಸಹಿತ ಮೂವರು ಸಂಪೂರ್ಣ ಗುಣಮುಖರಾಗಿದ್ದು, ಅವರನ್ನು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಇದರೊಂದಿಗೆ ಗುರುವಾರದವರೆಗೆ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದ 12 ಮಂದಿಯನ್ನು ಕೂಡ ಬಿಡುಗಡೆಗೊಳಿಸಿದಂತಾಗಿದೆ. ಆ ಮೂಲಕ ದ.ಕ.ಜಿಲ್ಲೆಯು ಕೊರೋನ ಸೋಂಕನ್ನು ಗೆಲ್ಲುವ ಮೂಲಕ ಮಹತ್ವದ ಮೈಲುಗಲ್ಲು ಸಾಧಿಸಿದರೂ ಕೂಡ ಶುಕ್ರವಾರ ಮತ್ತೊಬ್ಬರಿಗೆ ಸೋಂಕು ದೃಢಪಟ್ಟಿರುವುದು ಕೊಂಚ ಆತಂಕಕ್ಕೆ ಕಾರಣವಾಗಿದೆ.
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ 43 ವರ್ಷದ ವ್ಯಕ್ತಿ ಮಾ.11ರಂದು ದೆಹಲಿಗೆ ಪ್ರಯಾಣಿಸಿದ್ದು, ಮಾ. 22ರಂದು ಊರಿಗೆ ವಾಪಸ್ ಆಗಿದ್ದರು. ಎ.2ರಂದು ಇವರ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎ.4ರಂದು ಬಂದ ವರದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿತ್ತು. ಬಳಿಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಉಳ್ಳಾಲ ಸಮೀಪದ ತೊಕ್ಕೊಟ್ಟು ಜಂಕ್ಷನ್ನ ಫ್ಲಾಟ್ವೊಂದರ 52 ವರ್ಷ ಪ್ರಾಯದ ವ್ಯಕ್ತಿ ಫೆ.6ರಂದು ಮುಂಬೈಗೆ ತೆರಳಿದ್ದು, ಬಳಿಕ ಅಲ್ಲಿಂದ ದಿಲ್ಲಿಗೆ ಪ್ರಯಾಣಿಸಿದ್ದರು. ದಿಲ್ಲಿಯಿಂದ ಮಾ.22ರಂದು ತೊಕ್ಕೊಟ್ಟಿಗೆ ಮರಳಿದ್ದರು. ಎ.2ರಂದು ಇವರ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎ.4ರಂದು ಬಂದ ವರದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿತ್ತು. ಇವರನ್ನು ಕೂಡ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಉಡುಪಿ ಜಿಲ್ಲೆಯ 63 ವರ್ಷ ಪ್ರಾಯದ ಸಕ್ಕರೆ ಕಾಯಿಲೆ ಪೀಡಿತ ಮಹಿಳೆ ಮಾ.21ರಂದು ದುಬೈಯಿಂದ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಎ.2ರಂದು ಇವರ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎ.4ರಂದು ಬಂದ ವರದಿಯಲ್ಲಿ ಇವರಿಗೆ ಕೊರೋನ ಸೋಂಕು ಇರುವುದು ದೃಢಪಟ್ಟಿತ್ತು. ಇವರನ್ನು ಇಎಸ್ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಎ.4ರಂದು ಕೊರೋನ ಸೋಂಕು ದೃಢಪಟ್ಟಿದ್ದ ಇವರ ಗಂಟಲಿನ ದ್ರವವನ್ನು ಮತ್ತೆ ಎರಡು ಬಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ಬಂದ ವರದಿಯಲ್ಲಿ ಇದೀಗ ನೆಗೆಟಿವ್ ಬಂದ ಕಾರಣ ಮೂವರನ್ನು ಕೂಡ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಕೊರೋನ ಸೋಂಕಿಗೊಳಗಾಗಿ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಸರಗೋಡು ಮೂಲದ ಮೂವರು ಮತ್ತು ಭಟ್ಕಳದ ಯುವಕ ಸಹಿತ ನಾಲ್ಕು ಮಂದಿಯನ್ನು ಎ.6ರಂದು ಬಿಡುಗಡೆಗೊಳಿಸಲಾಗಿತ್ತು. ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ 21ರ ಹರೆಯದ ಯುವಕನನ್ನು ಎ.10ರಂದು ಮತ್ತು ನಗರದ ಖಾಸಗಿ ಆಸ್ಪತ್ರೆಯಲ್ಲಿದ್ದ 10 ತಿಂಗಳ ಮಗುವನ್ನು ಎ.11ರಂದು ಬಿಡುಗಡೆಗೊಳಿಸಲಾಗಿತ್ತು. 70ರ ಹರೆಯದ ವೃದ್ಧೆಯನ್ನು ಎ.12ರಂದು ಬಿಡುಗಡೆಗೊಳಿಸಲಾಗಿದ್ದರೆ, ಅಜ್ಜಾವರದ ಯುವಕನನ್ನು ಆಸ್ಪತ್ರೆಯಿಂದ ಎ.13ರಂದು ಬಿಡುಗಡೆಗೊಳಿಸಲಾಗಿತ್ತು. ಆರ್ಯಾಪು ಗ್ರಾಮದ ವ್ಯಕ್ತಿಯನ್ನು ಎ.14ರಂದು ಬಿಡುಗಡೆಗೊಳಿಸಲಾಗಿತ್ತು. ಇದೀಗ ಮೂವರನ್ನು ಬಿಡುಗಡೆಯೊಂದಿಗೆ 12 ಮಂದಿಯನ್ನು ಕೂಡ ಬಿಡುಗಡೆಗೊಳಿಸಿದಂತಾಗಿದೆ. ಶುಕ್ರವಾರ ಸೋಂಕು ದೃಢಪಟ್ಟ ವ್ಯಕ್ತಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡವರ ಕೈಗೆ ಸೀಲ್ ಹಾಕಲಾಗುತ್ತದೆ. ಕಡ್ಡಾಯವಾಗಿ 28 ದಿನಗಳ ಕಾಲ ಮನೆಯಲ್ಲಿ ಕ್ವಾರೆಂಟೈನ್ನಲ್ಲಿರುವಂತೆ ಸೂಚನೆ ನೀಡಲಾಗಿದೆ. ಸ್ಥಳೀಯ ಆರೋಗ್ಯ ಹಾಗೂ ಪೊಲೀಸ್ ಸಿಬ್ಬಂದಿ ಇವರ ಮೇಲೆ ನಿಗಾ ಇರಿಸಲಿದ್ದಾರೆ ಎಂದು ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸದಾಶಿವ ಶಾನ್ಭೋಗ್ ತಿಳಿಸಿದ್ದಾರೆ.







