ಉಡುಪಿಯಲ್ಲಿ ದಿಢೀರ್ ಕಾರ್ಯಾಚರಣೆ: ಅನಾವಶ್ಯಕವಾಗಿ ತಿರುಗಾಡುತ್ತಿದ್ದ ಹಲವು ವಾಹನಗಳು ವಶಕ್ಕೆ

ಉಡುಪಿ, ಎ.17: ಜನರಿಗೆ ಲಾಕ್‌ಡೌನ್ ಗಂಭೀರತೆಯನ್ನು ಮನವರಿಕೆ ಮಾಡಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಇಂದು ಸಂಜೆ ನಗರದ ಕಲ್ಸಂಕ ಜಂಕ್ಷನ್ ನಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿ, ಅನಾವಶ್ಯಕವಾಗಿ ರಸ್ತೆಗೆ ಇಳಿದ ವಾಹನಗನ್ನು ವಶಕ್ಕೆ ಪಡೆದುಕೊಂಡರು.
ಕಲ್ಸಂಕ ಜಂಕ್ಷನ್‌ನಲ್ಲಿ ಉಡುಪಿಯಿಂದ ಮಣಿಪಾಲ, ಮಣಿಪಾಲದಿಂದ ಉಡುಪಿ ಹಾಗೂ ಗುಂಡಿಬೈಲುವಿನಿಂದ ಕಲ್ಸಂಕಕ್ಕೆ ಬರುವ ರಸ್ತೆಗಳಿಗೆ ಬ್ಯಾರಿ ಕೇಡ್ ಆಳವಡಿಸಿ ವಾಹನಗಳ ತಪಾಸಣೆ ಕಾರ್ಯ ನಡೆಸಲಾಯಿತು. ಸ್ವತ: ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರೇ ರಸ್ತೆಗೆ ಇಳಿದು ಪ್ರತಿ ವಾಹನಗನ್ನು ತಪಾ ಸಣೆಗೆ ಒಳಪಡಿಸಿದರು.
ವಾಹನ ಚಾಲಕರ ಗುರುತಿನ ಚೀಟಿ, ಜಿಲ್ಲಾಡಳಿತ ನೀಡಿರುವ ಪಾಸ್‌ಗಳನ್ನು ಪರಿಶೀಲಿಸಿದ ಡಿಸಿ ಹಾಗೂ ಎಸ್ಪಿ, ನಿಯಮ ಉಲ್ಲಂಘಿಸಿ ದ್ವಿಚಕ್ರ ವಾಹನ ಹಾಗೂ ಕಾರುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದವರಿಗೆ ಎಚ್ಚರಿಕೆ ನೀಡಿದರು. ಅಲ್ಲದೆ ಅನಾವಶ್ಯಕವಾಗಿ ಓಡಾಡುತ್ತಿದ್ದ ಕಾರು, ರಿಕ್ಷಾ ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲು ಸೂಚನೆ ನೀಡಿದರು. ಪರವಾನಿಗೆ ಇಲ್ಲದೆ ಔಷಧಿಗಳನ್ನು ಸಾಗಿಸುತ್ತಿದ್ದವರ ವಾಹನಗಳನ್ನು ಕೂಡ ವಶಪಡಿಸಿಕೊಳ್ಳಲಾಯಿತು.
ನಂತರ ಇವರು ಕಲ್ಮಾಡಿ ಹಾಗೂ ಮಲ್ಪೆಗೆ ತೆರಳಿ ವಾಹನಗಳನ್ನು ತಾಪಸಣೆ ನಡೆಸಿದರು. ಅನಾವಶ್ಯಕವಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಮುಟ್ಟುಗೋಲು ಹಾಕಿ ಪ್ರಕರಣ ದಾಖಲಿಸಿಕೊಳ್ಳ ಲಾಯಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಉಡುಪಿ ಡಿವೈಎಸ್ಪಿ ಜೈಶಂಕರ್, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ, ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್, ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ನಗರ ಸಂಚಾರ ಠಾಣೆಯ ಉಪನಿರೀಕ್ಷಕ ಅಬ್ದುಲ್ ಖಾದರ್ ಮೊದಲಾದವರು ಹಾಜರಿದ್ದರು.
ದ್ವಿಚಕ್ರ ವಾಹನದಲ್ಲಿ ಒಬ್ಬರಿಗೆ ಮಾತ್ರ ಅವಕಾಶ
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಅನಾವಶ್ಯಕವಾಗಿ ತಿರುಗಾಡುತ್ತಿದ್ದ ಒಟ್ಟು 550 ದ್ವಿಚಕ್ರ, ಆಟೋರಿಕ್ಷಾ ಹಾಗೂ ಕಾರುಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಉಡುಪಿ ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ಸುರಕ್ಷಿತ ಅಂತರ ಕಾಪಾಡುವ ನಿಟ್ಟಿನಲ್ಲಿ ದ್ವಿಚಕ್ರದಲ್ಲಿ ಓರ್ವ, ಆಟೋ ರಿಕ್ಷಾ ಹಾಗೂ ಕಾರುಗಳಲ್ಲಿ ಚಾಲಕ ಹಾಗೂ ಹಿಂಬದಿಯಲ್ಲಿ ಒಬ್ಬರು ಮಾತ್ರ ಪ್ರಯಾಣಿಸಬಹುದಾಗಿದೆ. ಹೆಚ್ಚಿನವರು ಮೆಡಿಕಲ್ ಕಾರಣ ನೀಡಿ ರಸ್ತೆಗೆ ಇಳಿ ಯುತ್ತಿರುವುದು ಕಂಡುಬರುತ್ತಿದೆ. ಸ್ಥಳೀಯವಾಗಿ ದೊರೆಯುವ ಔಷಧಿಗಾಗಿ ಒಂದು ಕಿ.ಮೀ. ದೂರ ಅನಾವಶ್ಯಕವಾಗಿ ಸಂಚರಿಸುತ್ತಾರೆ. ವಾಹನಗಳನ್ನು ಮುಟ್ಟುಗೋಲು ಹಾಕಿ ನೋಟೀಸ್ ಜಾರಿ ಮಾಡಿ ದಂಡ ವಿಧಿಸಲಾಗುವುದು. ಲಾಕ್‌ಡೌನ್ ಅವಧಿ ಮುಗಿಯುವವರೆಗೂ ವಾಹನವನ್ನು ವಾಪಾಸ್ಸು ನೀಡು ವುದಿಲ್ಲ ಎಂದು ಅವರು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಮಂದಿ ಕೊರೋನ ಉಡುಪಿ ಜಿಲ್ಲೆಯನ್ನು ಬಿಟ್ಟು ಹೋಗಿದೆ ಎಂಬುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಇದೆಲ್ಲವೂ ತಪ್ಪು ಕಲ್ಪನೆಯಾಗಿದೆ. ಕೊರೋನ ಹೋಗಿದೆ ಎಂದು ನಿರ್ಧಾರ ಮಾಡುವುದು ಸರಕಾರವೇ ಹೊರತು ಜನರಲ್ಲ. ನಮ್ಮ ಜಿಲ್ಲೆ ಆರೆಂಜ್ ವಲಯ ವಾಗಿರುವುದರಿಂದ ಮೇ 3ರವರೆಗೆ ಇನ್ನಷ್ಟು ಅಲರ್ಟ್ ಆಗಿರಬೇಕಾಗಿದೆ. ಮುಂದೆ ಕೂಡ ನಮ್ಮ ಮುಂದೆ ಸಾಕಷ್ಟು ಸವಾಲುಗಳಿವೆ.
-ಜಿ.ಜಗದೀಶ್, ಜಿಲ್ಲಾಧಿಕಾರಿ ಉಡುಪಿ









