ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೋವಿಡ್ ಪರಿಹಾರ ನಿಧಿಗೆ ದೇಣಿಗೆ
ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷ, ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕೋವಿಡ್ ಚಿಕಿತ್ಸೆಗಾಗಿ ಪ್ರಧಾನ ಮಂತ್ರಿಗಳು ಪ್ರಾರಂಭಿಸಿರುವ ಪಿಎಮ್‍ಕೇರ್ ನಿಧಿಗೆ 5 ಕೋಟಿ ರೂ. ದೇಣಿಗೆಯನ್ನು ಇಂದು ಮಂಜೂರು ಮಾಡಿದ್ದು ಅದರಂತೆ ಮೊತ್ತ ರೂ.5 ಕೋಟಿಯನ್ನು ವರ್ಗಾವಣೆ ಮಾಡಲಾಗಿದೆಯೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್ ಮಂಜುನಾಥ್ ತಿಳಿಸಿರುತ್ತಾರೆ.
ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಲಾಕ್ ಡೌನ್ ನಿಂದ ತೊಂದರೆಗೀಡಾದವರಿಗೆ ಅಗತ್ಯ ಸಹಾಯವನ್ನು ಒದಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಸ್ಥಳೀಯ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಿರುವ ನೆರವಿನ ಹಸ್ತವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿಗಳು ಅಲ್ಲಲ್ಲಿ ನೀಡುತ್ತಿದ್ದಾರೆ. ತೊಂದರೆಗೊಳಗಾದವರು ಸಹಾಯದ ಅಗತ್ಯವಿದ್ದಲ್ಲಿ ಸ್ಥಳೀಯ ಸೇವಾಪ್ರತಿನಿಧಿಯನ್ನು ಸಂಪರ್ಕಿಸಬೇಕೆಂದು ಕಾರ್ಯನಿರ್ವಾಹಕ ನಿರ್ದೇಶಕರು ಕೋರಿರುತ್ತಾರೆ.
ಸ್ವಉದ್ಯೋಗಕ್ಕೆ ಸಹಾಯ :
ನಗರಗಳಲ್ಲಿ ಕೆಲಸ ಮಾಡುತ್ತಿದ್ದ ಕುಶಲಕರ್ಮಿಗಳು ಗ್ರಾಮಗಳಿಗೆ ಹಿಂದಿರುಗಿರುವ ಸಂದರ್ಭದಲ್ಲಿ ಆದಾಯ ಗಳಿಸಲು ಸ್ವಉದ್ಯೋಗ ಮಾಡುವರೇ ಯೋಜನೆಯು ಸಹಾಯ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದಕ್ಕಾಗಿ ತುರ್ತುಯಂತ್ರ ಒದಗಣೆ, ದುಡಿಯುವ ಬಂಡವಾಳ ಒದಗಣೆ, ಮಾರುಕಟ್ಟೆ ಒದಗಣೆಯ ಕಾರ್ಯಕ್ರಮವನ್ನು ಯೋಜನೆಯು ಪ್ರಾರಂಭಿಸಿದೆ. ಅಗತ್ಯವಿರುವ ಫಲಾನುಭವಿಗಳು ಯೋಜನೆಯ ಸ್ವಸಹಾಯ ಸಂಘದ ಸದಸ್ಯರಾಗಿರಲೇಬೇಕೆಂಬ ನಿಯಮವಿರುವುದಿಲ್ಲ. ಸ್ಥಳೀಯ ಸೇವಾಪ್ರತಿನಿಧಿಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಪಡಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.







