ರಾಜ್ಯದ ಜನರು 2ನೇ ದರ್ಜೆಯ ನಾಗರಿಕರೇ: ಪ್ರಿಯಾಂಕ್ ಖರ್ಗೆ ಪ್ರಶ್ನೆ

ಬೆಂಗಳೂರು, ಎ.17: ನಮ್ಮ ರಾಜ್ಯದವರು ಎರಡನೇ ದರ್ಜೆ ನಾಗರಿಕರೇ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.
ನೆರೆ ರಾಜ್ಯ ಮುಂಬೈನಲ್ಲಿ ಕಲಬುರಗಿಯ ಜಿಲ್ಲೆಯ ಒಂದು ಸಾವಿರ ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನು ಕರೆತರುವ ಕೆಲಸವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಡುವರೇ ಎಂದು ಅವರು ಪ್ರಶ್ನಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು 1,800 ಗುಜರಾತಿಗಳಿಗೆ ತಮ್ಮ ಮನೆಗಳಿಗೆ ಮರಳಲು ಅನುಕೂಲವಾಗಿರುವಾಗ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇದನ್ನು ಏಕೆ ಮಾಡಬಾರದು? ಮನೆಗೆ ಕಳುಹಿಸುವ ಮೊದಲು ಅವರನ್ನು ಪರೀಕ್ಷಿಸಲು ಗಡಿಯಲ್ಲಿ ಸಂಪರ್ಕ ತಡೆಯನ್ನು ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ವಿಡಿಯೋ ಮೂಲಕ ಅಂಗಲಾಚಿದ ಕಾರ್ಮಿಕರು: "ಕಲಬುರಗಿ ಜಿಲ್ಲೆಯ ಚಿಂಚೋಳಿ, ಕಾಳಗಿ ಮತ್ತು ಕಮಲಾಪುರ ತಾಲೂಕುಗಳಿಂದ ಬಂದಿದ್ದೇವೆ. ಇಲ್ಲಿಂದ ಮತ್ತೆ ಸ್ವಂತ ತಾಂಡಾಗಳಿಗೆ ಬರಲಾಗದೇ ಚಡಪಡಿಸುತ್ತಿದ್ದೇವೆ. ನಮ್ಮ ಊರಿಗೆ ಮರಳಲು ನೆರವಾಗಿ ಎಂದು ಮುಂಬೈಯಲ್ಲಿ ಬಾಕಿಯಾಗಿರುವ ಕಾರ್ಮಿಕರು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ.
ಕಲಬುರಗಿಯ ಜಿಲ್ಲೆಯ ಉದ್ಯಮಿ, ಸದ್ಯ ಮುಂಬೈನಲ್ಲಿ ನೆಲೆಸಿರುವ ಶಂಕರ ಪವಾರ ಎಂಬುವವರು ಪ್ರತಿ ಕುಟುಂಬಗಳಿಗೆ 10 ಕೆ.ಜಿ. ಆಹಾರ ಸಾಮಗ್ರಿ ಕೊಡಿಸಿದ್ದಾರೆ. ನಂತರ ನಮ್ಮ ಕಡೆ ಯಾರೂ ನೋಡಿಲ್ಲ. ನಮ್ಮನ್ನು ನಮ್ಮ ಊರಿಗೆ ಕಳುಹಿಸಿಕೊಡಿ ಎಂದರೆ ನಮ್ಮ ಕೂಗು ಅರಣ್ಯರೋದನವಾಗಿದೆ. ಕುಡಿಯಲು ನೀರನ್ನೂ ಖರೀದಿಸಿ ತರಬೇಕು. ಬೆಳಗಿನ ನಿತ್ಯಕರ್ಮಕ್ಕೂ ಹಣ ನೀಡುವುದು ಅನಿವಾರ್ಯ ಎಂದು ಗುಳೆ ಕಾರ್ಮಿಕರು ವಿಡಿಯೋ ಮೂಲಕ ಗೋಳು ತೋಡಿಕೊಂಡಿದ್ದಾರೆ.







