ರಾಜ್ಯದಲ್ಲಿ ಮತ್ತೆ ತಲೆ ಎತ್ತಿದ ಕಳ್ಳಬಟ್ಟಿ ಸಾರಾಯಿ ದಂಧೆ
ಬೆಂಗಳೂರು, ಎ.17: ಕೋವಿಡ್-19 ನಿಯಂತ್ರಣಕ್ಕೆ ಲಾಕ್‍ಡೌನ್ ಜಾರಿಯಾದ ಬೆನ್ನಲ್ಲೇ ಮದ್ಯದ ಅಂಗಡಿಗಳು ಮುಚ್ಚಿರುವುದನ್ನೆ ನೆಪ ಮಾಡಿಕೊಂಡಿರುವ ಕಳ್ಳಬಟ್ಟಿ ಸಾರಾಯಿ ದಂಧೆಕೋರರು ರಾಜಾರೋಷವಾಗಿಯೇ ರಾಜ್ಯದ ವಿವಿಧ ಭಾಗಗಳಲ್ಲಿ ತಯಾರಿಸುತ್ತಿದ್ದ ಕಳ್ಳಬಟ್ಟಿ ಸಾರಾಯಿ ಅಡ್ಡೆ ಗಳ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಸಾರಾಯಿ ಹಾಗೂ ದಂಧೆಕೋರರನ್ನು ವಶಕ್ಕೆ ಪಡೆದಿದ್ದಾರೆ.
ಕಳ್ಳಬಟ್ಟಿ ಸಾರಾಯಿ ದಂಧೆಯು ಕರ್ನಾಟಕದ ಕೋಲಾರ, ಬೆಂಗಳೂರು ಗ್ರಾಮಾಂತರ, ಹಾವೇರಿ, ಬಾಗಲಕೋಟೆ, ಗದಗ, ರಾಮನಗರ ಸೇರಿ ಇನ್ನಿತರ ಜಿಲ್ಲೆಗಳಲ್ಲಿ ರಾಜಾರೋಷವಾಗಿ ನಡೆಯುತ್ತಿತ್ತು. ಈ ಮಾಹಿತಿಯನ್ನು ಕಲೆ ಹಾಕಿದ ಅಬಕಾರಿ ಇಲಾಖೆಯ ಅಧಿಕಾರಿಗಳ ದಿಢೀರ್ ದಾಳಿ ನಡೆಸಿ ಕಳ್ಳಬಟ್ಟಿ ಸಾರಾಯಿ ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಅಕ್ರಮ ಸಾರಾಯಿ ಕುಡಿದು ನೂರಾರು ಸಂಖ್ಯೆಯಲ್ಲಿ ಜನರು ಸಾವನ್ನಪ್ಪಿದ್ದರು. ಹೀಗಾಗಿ ಹಲವು ವರ್ಷಗಳಿಂದ ಕಳ್ಳಬಟ್ಟಿ ಸಾರಾಯಿ ದಂಧೆ ನಡೆಯುತ್ತಿರಲಿಲ್ಲ. ಇದೀಗ ಕೊರೋನ ವೈರಸ್ ಅನ್ನೇ ನೆಪ ಮಾಡಿಕೊಂಡಿರುವ ದಂಧೆಕೋರರು ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸಿ ಮಾರಾಟ ಮಾಡಲು ಹೊರಟಿದ್ದಾರೆ.
ರಾಜ್ಯದ ಗಡಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಕಳ್ಳಬಟ್ಟಿ ಸಾರಾಯಿಯನ್ನು ತಯಾರಿಸಲಾಗುತ್ತಿದೆ. ಗಡಿ ರಾಜ್ಯಗಳಿಂದಲೂ ಕರ್ನಾಟಕಕ್ಕೆ ಕಳ್ಳಬಟ್ಟಿ ಸಾರಾಯಿ ಬರುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.







