ಕೊರೋನದಿಂದ ಸಾವಿರಾರು ಮಕ್ಕಳು ಸಾವನ್ನಪ್ಪುವ ಅಪಾಯ: ವಿಶ್ವಸಂಸ್ಥೆ ಎಚ್ಚರಿಕೆ

ಹೊಸದಿಲ್ಲಿ,ಎ.18: ಕೊರೋನ ವೈರಸ್ ಹಾವಳಿಯಿಂದಾಗಿ ಉಂಟಾಗಿರುವ ಆರ್ಥಿಕ ಹಿಂಜರಿವು ಈ ವರ್ಷ ಸಾವಿರಾರು ಶಿಶುಗಳ ಸಾವಿಗೆ ಕಾರಣವಾಗಲಿದೆ ಹಾಗೂ ಕೋಟ್ಯಂತರ ಮಂದಿಯನ್ನು ಕಡುಬಡತನದ ಅಂಚಿಗೆ ತಳ್ಳಲಿದೆ ಎಂದು ವಿಶ್ವಸಂಸ್ಥೆ ಗುರುವಾರ ಪ್ರಕಟಿಸಿರುವ ವರದಿಯೊಂದು ಎಚ್ಚರಿಕೆ ನೀಡಿದೆ.
ಕೋವಿಡ್-19 ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಈ ವರ್ಷ ಜಗತ್ತಿನಾದ್ಯಂತ 4.20 ಕೋಟಿಯಿಂದ 6.60 ಕೋಟಿ ಮಕ್ಕಳು ಕಡುಬಡತನದ ಕೂಪಕ್ಕೆ ಜಾರಲಿದ್ದಾರೆ ಎಂದು ವರದಿ ಹೇಳಿದೆ.
ಶಿಶು ಮರಣವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕಳೆದ ಎರಡು ಮೂರು ವರ್ಷಗಳಲ್ಲಿ ಜಗತ್ತು ಸಾಧಿಸಿದ ಪ್ರಗತಿಯನ್ನು, ಕೊರೋನ ವೈರಸ್ ಪಿಡುಗಿನಿಂದ ಉಂಟಾಗಿರುವ ಆರ್ಥಿಕ ದುಷ್ಪರಿಣಾಮವು ಒಂದೇ ವರ್ಷದಲ್ಲಿ ತಿರುವು ಮುರುವುಗೊಳಿಸಲಿದೆ ಎಂದು ವರದಿ ಬಿಡುಗಡೆಗೊಳಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗ್ಯುಟೆರಸ್ ಆತಂಕ ವ್ಯಕ್ತಪಡಿಸಿದ್ದಾರೆ.
‘‘ಇದೊಂದು ಹಿಂದೆಂದೂ ಇಲ್ಲದಂತಹ ಸಾರ್ವತ್ರಿಕ ಬಿಕ್ಕಟ್ಟಾಗಿದೆ’’ ಎಂದು ಅವರು ಅಭಿಪ್ರಾಯಿಸಿದ್ದಾರೆ. ಎಲ್ಲಾ ದೇಶಗಳ ಎಲ್ಲಾ ವಯಸ್ಸಿನ ಮಕ್ಕಳ ಮೇಲೆ ಕೊರೋನ ಪರಿಣಾಮವುಂಟು ಮಾಡಿದೆ. ಆದಾಗ್ಯೂ, ಕೆಲವು ಮಕ್ಕಳು ಇದರಿಂದಾಗಿ ದೊಡ್ಡ ಬೆಲೆಯನ್ನೇ ತೆರಬೇಕಾಗಿ ಬಂದಿದೆ. ನಮ್ಮ ಮಕ್ಕಳನ್ನು ರಕ್ಷಿಸೋಣ ಹಾಗೂ ಅವರ ಹಿತರಕ್ಷಣೆ ಮಾಡೋಣ ಎಂಬ ಮನವಿಯನ್ನು ನಾನು ಪುನರುಚ್ಚರಿಸುತ್ತೇನೆ ಎಂದು ಗುಟೆರಸ್ ಹೇಳಿದರು.
ನಿರಾಶ್ರಿತ ಹಾಗೂ ಪುನರ್ವಸತಿ ಶಿಬಿರಗಳಲ್ಲಿ ವಾಸವಾಗಿರುವ ಮತ್ತು ಸಂಘರ್ಷದ ವಲಯಗಳಲ್ಲಿರುವ ಮಕ್ಕಳು ಹಾಗೂ ಅಂಗವಿಕಲ ಮತ್ತು ಬಂಧನ ಕೇಂದ್ರಗಳಲ್ಲಿರುವ ಮಕ್ಕಳು ಕೊರೋನ ಹಾವಳಿಯಿಂದಾಗಿ ತೀವ್ರ ಬಾಧಿತರಾಗಿದ್ದಾರೆ ಎಂದು ವರದಿ ಹೇಳಿದೆ.
ಕೊರೋನ ವೈರಸ್‌ನಿಂದ ಉಂಟಾಗಿರುವ ಸೋಂಕು ಹಾಗೂ ಈ ರೋಗದ ಹಾವಳಿ ತಡೆಗೆ ಕೈಗೊಳ್ಳಲಾದ ಕ್ರಮಗಳಿಗಾಗಿ ತಗಲಿದ ಆರ್ಥಿಕ ಹೊರೆ ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಅನುಷ್ಠಾನಗೊಳಿಸುವಲ್ಲಿ ಉಂಟಾಗಿರುವ ವಿಳಂಬ, ಈ ಮೂರು ಪ್ರಮುಖ ಕಾರಣಗಳಿಂದಾಗಿ ಕೋಟ್ಯಂತರ ಮಕ್ಕಳು ದುಸ್ಥಿತಿಗೊಳಗಾಗಿದ್ದಾರೆಂದು ವರದಿ ಆತಂಕ ವ್ಯಕ್ತಪಡಿಸಿದೆ.
ಕೊರೋನ ಸೋಂಕು ಜಗತ್ತಿನಾದ್ಯಂತ ಶಿಕ್ಷಣದ ಬಿಕ್ಕಟ್ಟನ್ನೂ ಸೃಷ್ಟಿಸಿದೆ ಎಂದು ವರದಿ ಗಮನಸೆಳೆದಿದೆ. 188ಕ್ಕೂ ಅಧಿಕ ದೇಶಗಳು, ಈ ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ ಶಾಲೆಗಳನ್ನು ಮುಚ್ಚಿದ್ದು, ಇದರಿಂದ 150 ಕೋಟಿಗೂ ಅಧಿಕ ಮಕ್ಕಳು ಹಾಗೂ ಯುವಜನರು ಬಾಧಿತರಾಗಿದ್ದಾರೆ. ಇಂದಿನ ಯುವತಲೆಮಾರಿನ ಕಲಿಕೆಗೆ ಉಂಟಾಗಿರುವ ಅಡಚಣೆಯಿಂದಾಗಿ, ಮಾನವಸಂಪನ್ಮೂಲದ ಮೇಲಾಗುವ ನಷ್ಟವು ಏಣಿಕೆಗೂ ಮೀರಿದ್ದಾಗಿದೆ ಎಂದು ವರದಿ ಹೇಳಿದೆ.
ಕೊರೋನ ವೈರಸ್ ಸಾಂಕ್ರಾಮಿಕವು ಮಕ್ಕಳ ಬದುಕಿನಲ್ಲಿ ಉಂಟು ಮಾಡುವ ದುಷ್ಪರಿಣಾಮವನ್ನು ಕಡಿಮೆಗೊಳಿಸಲು ಬಡಕುಟುಂಬಗಳಿಗೆ ಸಾಮಾಜಿಕ ಭದ್ರತೆಯನ್ನು ವಿಸ್ತರಿಸುವಂತೆ ಹಾಗೂ ಅವರಿಗೆ ಆಹಾರ ಪೂರೈಕೆಯ ವ್ಯವಸ್ಥೆಯನ್ನು ಬಲಪಡಿಸುವಂತೆ ಗ್ಯುಟೆರಸ್ ಅವರು ವಿಶ್ವದ ರಾಷ್ಟ್ರಗಳಿಗೆ ರೆ ನೀಡಿದ್ದಾರೆ. ಶಾಲಾ ಶಿಕ್ಷಣ ಹಾಗೂ ಬಾಣಂತಿಯರ ಶುಶ್ರೂಷೆಯಂತಹ ಸೇವೆಗಳು ನಿರಂತರವಾಗಿ ಮುಂದುವರಿಯುವುದಕ್ಕೆ ಸರಕಾರವು ಆದ್ಯತೆ ನೀಡಬೇಕೆಂದು ಗ್ಯುಟೆರಸ್ ತಿಳಿಸಿದ್ದಾರೆ.







