ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನ ಪರೀಕ್ಷೆಗೆ 2,250 ರೂ. ಶುಲ್ಕ ನಿಗದಿ

ಬೆಂಗಳೂರು, ಎ.17: ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನ ವೈರಸ್ ಸೋಂಕು ಪರೀಕ್ಷೆಗೆ 2,250 ರೂ. ಶುಲ್ಕ ನಿಗದಿಪಡಿಸಲಾಗಿದೆ ಎಂದು ವೈದ್ಯಕೀಯ ಮಂಡಳಿ ಪ್ರಕಟಣೆ ತಿಳಿಸಿದೆ.
ಕೊರೋನಾ ವೈರಸ್ ಲಾಕ್‍ಡೌನ್ ಹಿನ್ನೆಲೆ ಹೆಚ್ಚು ಮಂದಿಯ ವೈದ್ಯಕೀಯ ತಪಾಸಣೆಗೆ ಸರಕಾರ ಒತ್ತು ನೀಡಿದ್ದು, ಇದಕ್ಕಾಗಿ ರಾಜ್ಯದ 16 ಆಸ್ಪತ್ರೆಗಳಲ್ಲಿ ಕೊರೋನ ಸೋಂಕು ಪರೀಕ್ಷೆಗೆ ಅನುಮತಿ ನೀಡಲಾಗಿದೆ. ಅಲ್ಲದೇ, ಸರಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆಯ ವೆಚ್ಚವನ್ನು ಸರಕಾರ ಭರಿಸಲಿದೆ ಎಂದು ತಿಳಿಸಿದೆ.
ರಾಜ್ಯದಲ್ಲಿ 16 ಆಸ್ಪತ್ರೆಗಳಿಗೆ ಕೊರೋನ ವೈರಸ್ ಸೋಂಕು ಪರೀಕ್ಷೆಗೆ ಅನುಮತಿ ನೀಲಾಗಿದೆ. ಈ ಪೈಕಿ 11 ಸರಕಾರಿ ಹಾಗೂ 5 ಖಾಸಗಿ ವಲಯದ ಆಸ್ಪತ್ರೆಗಳು ಇವೆ. ಯಾವುದೇ ಸಂದರ್ಭದಲ್ಲಿಯೂ ನಿಗದಿಗಿಂತ ಹೆಚ್ಚಿನ ಶುಲ್ಕ ತೆಗೆದುಕೊಳ್ಳುವಂತಿಲ್ಲ ಎಂದು ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.
ಇದರ ಜತೆಗೆ ಕೊರೋನ ವೈರಸ್ ಸೋಂಕಿತರ ಪರೀಕ್ಷಾ ವಿವರಗಳನ್ನು ಖಾಸಗಿ ಆಸ್ಪತ್ರೆಗಳು ಆಗಿಂದಾಗ್ಗೆ ರಾಜ್ಯ ಸರಕಾರಗಳಿಗೆ ರವಾನಿಸಬೇಕು ಎಂದು ಷರತ್ತು ವಿಧಿಸಲಾಗಿದೆ.
Next Story





