ಆಪತ್ಕಾಲೀನ ಸನ್ನಿವೇಶಗಳು ಯಾಕೆ ಬರುತ್ತವೆ?
ಚಿಂತನೆ
ಇದು ಅನೇಕರನ್ನು ಅನೇಕ ಬಾರಿ ಕಾಡಿರುವ ಪ್ರಶ್ನೆ. ಸಂಕಟದ ಮತ್ತು ಆಪತ್ತಿನ ಸನ್ನಿವೇಶಗಳು ಸುಮ್ಮ ಸುಮ್ಮನೆ ಬರುವುದಿಲ್ಲ.
ಅವು ನಿಜವಾಗಿ, ನಮ್ಮ ತಿಳುವಳಿಕೆ ಹೆಚ್ಚಿಸಲು ಬರುತ್ತವೆ.
ಅವು ನಮ್ಮ ಕಣ್ಣು ತೆರೆಸಲು ಬರುತ್ತವೆ.
ಅವು ನಮ್ಮನ್ನು ನಮಗೆ ಪರಿಚಯಿಸಲು ಬರುತ್ತವೆ.
ನಮ್ಮ ಮಾನವ ಸಮಾಜದಲ್ಲಿ, ಮಾನವರಂತೆ ಕಾಣುವವರ ಪೈಕಿ ನಿಜವಾದ ಮಾನವರು ಯಾರು?
ಮಾನವೀಯ ಸಂವೇದನೆ, ಸಹತಾಪ, ಕಳಕಳಿ ಉಳ್ಳವರು ಯಾರು?
ತಮ್ಮ ಬಳಿ ಇದ್ದುದನ್ನು ಅಕ್ಕಪಕ್ಕದವರ ಜೊತೆ ಹಂಚಿ ತಿನ್ನುವವರು ಯಾರು?
ಹಸಿದಿರುವ, ಸಂಕಷ್ಟದಲ್ಲಿರುವ ಮನುಷ್ಯರನ್ನು ಹುಡುಕಿ ಹೋಗಿ, ನೆರವು ತಲುಪಿಸುವವರು ಯಾರು?
ಇತರರಿಗೆ ನೆರವಾಗಲು ಸ್ವತಃ ತಮ್ಮ ಸುಖವನ್ನು ತ್ಯಜಿಸಿ ಸೇವೆಗಿಳಿಯುವ ಸಜ್ಜನರು ಯಾರು?
ಸಂಕಟದ ಸನ್ನಿವೇಶದಲ್ಲಿ ಸಮಾಜಕ್ಕೆ ಸಹನೆ ಸಂಯಮಗಳನ್ನು ಬೋಧಿಸುವವರು ಯಾರು? ಉಪಕರಿಸಲು ತವಕಿಸುವವರು ಯಾರು?
ಕಣ್ಣೀರು ಅಳಿಸಲು ಲಭ್ಯವಾಗುವವರು ಯಾರು?
ಸಂಕಟದ ಸನ್ನಿವೇಶದಲ್ಲಿ ಜನರ ನಡುವಣ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿ, ಸಾಮೂಹಿಕ ಸಂಕಷ್ಟವನ್ನು ಎಲ್ಲರೂ ಜೊತೆಯಾಗಿ ಎದುರಿಸೋಣ ಎಂಬ ಸ್ಫೂರ್ತಿಯನ್ನು ಎಲ್ಲರಲ್ಲಿ ಬೆಳೆಸುವವರು ಯಾರು?
ಹಾಗೆಯೇ,
ಸಮಾಜಕ್ಕೆ ಯಾವ ಉಪಕಾರವನ್ನೂ ಮಾಡಲೊಲ್ಲದ ಸ್ವಾರ್ಥಿಗಳು ಯಾರು?
ಕಾಳ ಸಂತೆ, ಬೆಲೆ ಏರಿಕೆಗಳ ಮೂಲಕ ತಮ್ಮ ಕ್ರೂರ ಸ್ವಾರ್ಥ ಮೆರೆಯುವ ಸಂದರ್ಭ ಸಾಧಕರು ಯಾರು?
ಇನ್ನೊಬ್ಬರನ್ನು ಸಂಕಷ್ಟದಲ್ಲಿ ಕಂಡು ಸಂತೋಷ ಪಡುವವರು ಯಾರು?
ಸಂಕಟದಲ್ಲಿರುವವರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲು ಶ್ರಮಿಸುವವರು ಯಾರು?
ಸಂಕಷ್ಟದ ಸನ್ನಿವೇಶದಲ್ಲಿ ಜನರ ಮಧ್ಯೆ ಸಂಶಯ, ಅನುಮಾನ, ಅಪನಂಬಿಕೆಗಳ ಬೀಜ ಬಿತ್ತಿ, ಸುಳ್ಳು ವದಂತಿಗಳನ್ನು ಹರಡಿ ಸಮಾಜವನ್ನು ಛಿದ್ರಗೊಳಿಸುವವರು ಯಾರು?
ಹತ್ತಾರು ಪೀಳಿಗೆಗಳಿಗೆ ಬೇಕಾದಷ್ಟು ಸಂಪತ್ತಿನ ಬೃಹತ್ ಸಂಗ್ರಹ ತಮ್ಮ ಬಳಿ ಇದ್ದರೂ, ಅಕ್ಕ ಪಕ್ಕದ ಹಸಿದವರಿಗೆ ಒಂದೊತ್ತಿನ ತುತ್ತು ಅನ್ನ ನೀಡಲು ನಿರಾಕರಿಸುವವರು ಯಾರು?
ಅಕ್ಕಪಕ್ಕದವರ ತುರ್ತು ಅಗತ್ಯಗಳನ್ನು ಕಾಣಲೊಲ್ಲದ ಕುರುಡರು ಯಾರು? ಸುತ್ತ ಮುತ್ತಲ ಆಕ್ರಂದನಗಳನ್ನೂ ಆಲಿಸಲೊಲ್ಲದ ಕಿವುಡರು ಯಾರು?
ಹೀಗೆ,
ಸಂಕಟದ ಮತ್ತು ಆಪತ್ತಿನ ಸನ್ನಿವೇಶಗಳು ಸುಮ್ಮ ಸುಮ್ಮನೆ ಬರುವುದಿಲ್ಲ.
ಅವು ಮೇಲಿನ ಎಲ್ಲ ಪ್ರಶ್ನೆಗಳಿಗೆ ಉತ್ತರ ಹೊತ್ತು ಬರುತ್ತವೆ.
ಅವು ಸ್ವತಃ ನಮ್ಮ ಮತ್ತು ನಮ್ಮ ಸುತ್ತ ಮುತ್ತಲಿನ ಹಲವರ ನಿಜರೂಪವನ್ನು ಬಯಲುಗೊಳಿಸಲೆಂದೇ ಬರುತ್ತವೆ.
ಹೊರಗೆ ಕಾಣದ ಒಳರೂಪಗಳನ್ನು ಬಿಚ್ಚಿಡಲು ಬರುತ್ತವೆ.
ನಮ್ಮ ಪಾಲಿಗೆ ನಮ್ಮ ಒಳಸ್ಥಿತಿಯ ಕನ್ನಡಿಯಾಗಿ ಬರುತ್ತವೆೆ.
ನಮಗೆ ನಮ್ಮನ್ನು ಪರಿಚಯಿಸಲು ಬರುತ್ತವೆ.







