ನಿಖಿಲ್ ವಿವಾಹಕ್ಕೆ ಸಿಎಂ ಯಡಿಯೂರಪ್ಪ ಶುಭಕೋರಿದ್ದ ಟ್ವೀಟ್ ಡಿಲಿಟ್

ಬೆಂಗಳೂರು, ಎ.17: ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ವಿವಾಹಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಶುಭಕೋರಿ ಟ್ವೀಟರ್ ಹಾಗೂ ಫೇಸ್‌ಬುಕ್ ನಲ್ಲಿ ಹಾಕಿದ್ದ ಪೋಸ್ಟ್ ಅನ್ನು ಖಾತೆಯಿಂದ ಡಿಲಿಟ್ ಮಾಡಲಾಗಿದೆ.
ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ಮದುವೆ ಇಂದು ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿಯಲ್ಲಿ ನಡೆದಿತ್ತು. ಇವರ ಮದುವೆಗೆ ಶುಭಕೋರಿದ್ದ ಯಡಿಯೂರಪ್ಪ ಅವರು, ‘ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ದಂಪತಿಗೆ ಶುಭಾಶಯಗಳು. ಇವರ ದಾಂಪತ್ಯ ಜೀವನವು ಸುಖಮಯವಾಗಿರಲಿ ಎಂದು ಹಾರೈಸುತ್ತೇನೆ' ಎಂದು ಟ್ವೀಟ್ ಮಾಡಿದ್ದರು. ಶುಕ್ರವಾರ ಮಧ್ಯಾಹ್ನ 12.59ಕ್ಕೆ ಈ ಟ್ವೀಟ್ ಮಾಡಲಾಗಿತ್ತು. ಆದರೆ ಸಂಜೆ ವೇಳೆಗೆ ಟ್ವೀಟರ್ ಹಾಗೂ ಫೇಸ್‌ಬುಕ್ ಪೋಸ್ಟ್ ಗಳೆರಡೂ ಡಿಲಿಟ್ ಆಗಿವೆ.

ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿಯ ಮಾಜಿ ಸಿಎಂ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ವಿವಾಹ ನಡೆದಿತ್ತು. ಕೆಲವರಿಗಷ್ಟೇ ಆಮಂತ್ರಣವಿದ್ದ ಈ ವಿವಾಹ ಮಹೋತ್ಸವದಲ್ಲಿ ಕೆಲವೇ ಗಣ್ಯರು ಪಾಲ್ಗೊಂಡಿದ್ದರು. ಆದರೆ ವಿವಾಹ ಕಾರ್ಯಕ್ರಮದಲ್ಲಿ ಸುರಕ್ಷಿತ ಅಂತರ ಪಾಲನೆಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.







