ಭಾರತೀಯ ನೌಕಾಪಡೆಯ ಕನಿಷ್ಠ 20 ಮಂದಿಗೆ ಕೋವಿಡ್-19 ಸೋಂಕು

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಭಾರತೀಯ ನೌಕಾಪಡೆಯ ಕನಿಷ್ಠ 20 ಮಂದಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಅಮೆರಿಕದ ಮುಂಚೂಣಿ ಯುದ್ಧನೌಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ಮಂದಿಗೆ ಸೋಂಕು ತಗುಲಿರುವ ಬೆನ್ನಲ್ಲೇ ಭಾರತದ ನೌಕಾಪಡೆ ಸಿಬ್ಬಂದಿಯಲ್ಲೂ ಸೋಂಕು ಕಾಣಿಸಿಕೊಂಡಿದೆ.
ಮುಂಬೈ ಕೊಲಾಬಾದಲ್ಲಿರುವ ಐಎನ್ಎಚ್ಎಸ್ ಅಶ್ವಿನಿ ನೌಕಾಪಡೆ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇಬ್ಬರು ನೌಕಾಪಡೆ ಅಧಿಕಾರಿಗಳು ಹೇಳಿದ್ದಾರೆ. ಭಾರತೀಯ ಸೇನೆಯಲ್ಲಿ ಎಂಟು ಪ್ರಕರಣಗಳು ಬೆಳಕಿಗೆ ಬಂದಿದ್ದು, ನೌಕಾಪಡೆಯಲ್ಲಿ ಸೋಂಕು ಪ್ರಕರಣ ವರದಿಯಾಗಿರುವುದು ಇದೇ ಮೊದಲು.
ಯುದ್ಧನೌಕೆಗಳು ಹಾಗೂ ಸಬರ್ಮೆರಿನ್ನಂಥ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿರುವ ವ್ಯವಸ್ಥೆಯನ್ನು ಸೋಂಕಿನಿಂದ ಮುಕ್ತಗೊಳಿಸುವುದು ಅಗತ್ಯ. ನೌಕಾಪಡೆ ಯಾವುದೇ ಸಂದರ್ಭದಲ್ಲೂ ಯುದ್ಧಸನ್ನದ್ಧವಾಗಿರುತ್ತದೆ ಎಂದು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಮ್ಬೀರ್ ಸಿಂಗ್ ಹೇಳಿದ್ದಾರೆ.
ಅನಗತ್ಯ ತರಬೇತಿ ರದ್ದುಪಡಿಸುವುದು, ಸಮ್ಮೇಳನ ಹಾಗೂ ಪ್ರವಾಸ ರದ್ದತಿ, ನೇಮಕಾತಿ ಸ್ಥಗಿತ ಮತ್ತು ವಿದೇಶಿ ನಿಯೋಜನೆ ರದ್ದು, 50ಕ್ಕಿಂತ ಹೆಚ್ಚು ಸೈನಿಕರು ಒಂದೆಡೆ ಸೇರುವುದು, ಅಧಿಕಾರಿಗಳಿಗೆ ಎಲ್ಲ ಕೋರ್ಸ್ಗಳ ಮುಂದೂಡಿಕೆ, ಸಾಧ್ಯವಿರುವ ಎಲ್ಲೆಡೆ ಮನೆಗಳಿಂದ ಕಾರ್ಯನಿರ್ವಹಿಸಲು ಸೂಚಿಸಿದ್ದೂ ಸೇರಿದಂತೆ ಸಶಸ್ತ್ರ ಪಡೆಗಳು ಸೋಂಕನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ.







