ಅನ್ನಕ್ಕಾಗಿ ಆಸೆ ಕಣ್ಣಿನಿಂದ ಕಾಯುತ್ತಿರುವ ನೆರೆ ಸಂತ್ರಸ್ತರು

ಬೆಂಗಳೂರು, ಎ.17: ಕೊರೋನ ಮಹಾಮಾರಿಯ ಪರಿಣಾಮದಿಂದಾಗಿ ದೇಶದಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅದರ ನಡುವೆ ಇತ್ತೀಚಿಗೆ ಹಿಂದೆಂದೂ ಕಾಣದಂತಹ ಭೀಕರ ಪ್ರವಾಹದಿಂದ ನಲುಗಿದ ಉತ್ತರಕರ್ನಾಟಕದ ಜನತೆ ಮತ್ತೊಬ್ಬರು ನೀಡುವ ತುತ್ತು ಅನ್ನಕ್ಕಾಗಿ ಆಸೆಕಣ್ಣಿನಿಂದ ಕಾಯುವಂತಾಗಿದೆ.
ಕರ್ನಾಟಕದಲ್ಲಿ ಹಿಂದೆಂದೂ ಕಾಣದಂತಹ ರೀತಿಯಲ್ಲಿ ನೆರೆಯಿಂದಾಗಿ ನೂರಾರು ಕುಟುಂಬಗಳು ಬೀದಿಪಾಲಾಗಿದ್ದವು. ಪ್ರವಾಹದಿಂದಾಗಿ ಉತ್ತರಕರ್ನಾಟಕದ ಕೃಷ್ಣಾ, ಭೀಮಾ, ಘಟಪ್ರಭಾ, ವರದಾ ಹಾಗೂ ತುಂಗಭದ್ರಾ ತೀರಗಳು ಸೇರಿದಂತೆ ಗದಗ, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಯಾದಗಿರಿ, ರಾಯಚೂರು, ಬೆಳಗಾವಿ ಸೇರಿದಂತೆ 15ಕ್ಕೂ ಅಧಿಕ ಜಿಲ್ಲೆಗಳ ನೂರಕ್ಕೂ ಅಧಿಕ ತಾಲೂಕುಗಳ ನೂರಾರು ಸಂತ್ರಸ್ತ ಕುಟುಂಬಗಳಿಂದ ದಯನೀಯ ಸ್ಥಿತಿಯಲ್ಲಿದ್ದಾರೆ. ಇವರನ್ನು ಕೊರೋನ ವೈರಸ್‌ಗಿಂತಲೂ ಹಸಿವು ಭೀಕರವಾಗಿ ಭಾದಿಸುತ್ತಿರುವುದು ನೋವಿನ ಸಂಗತಿಯಾಗಿದೆ. ಸರಕಾರಗಳು ನೆರೆ ಸಂತ್ರಸ್ತರ ಸಬಲೀಕರಣಕ್ಕಾಗಿ ಸಾಕಷ್ಟು ಶ್ರಮವಹಿಸಿದೆಯಾದರೂ, ನಿರೀಕ್ಷಿತ ಪ್ರಮಾಣದಲ್ಲಿ ಸಫಲವಾಗಿಲ್ಲ.
ನೆರೆ ಇಳಿಯಿತು, ಇನ್ನೇನು ಮತ್ತೆ ಬದುಕು ಕಟ್ಟಿಕೊಳ್ಳಬೇಕು ಎಂಬ ಆಸೆಯಲ್ಲಿದ್ದ ಜನತೆಗೆ ಕೊರೋನ ಎಂಬ ಮಹಾಮಾರಿ ಎದುರಾಯಿತು. ಇಂದಿಗೂ ನೆರೆ ಸಂತ್ರಸ್ತರಲ್ಲಿ ಹಲವರಿಗೆ ಸರಿಯಾದ ಸೂರಿಲ್ಲ, ನೆಲೆ ನಿಲ್ಲಲು ಸ್ಥಳವಿಲ್ಲದಂತಾಗಿದೆ. ಹಾದಿ ಬೀದಿಯಲ್ಲಿ ತಾತ್ಕಾಲಿಕವಾಗಿ ಕಟ್ಟಿಕೊಂಡಿರುವ ಗುಡಿಸಲು, ಜೋಪಡಿಗಳಲ್ಲಿಯೇ ಲಾಕ್ ಆಗಿದ್ದಾರೆ.
ಕಳೆದ ಆರು ಏಳು ತಿಂಗಳಿಂದಲೂ ಬೀದಿಯಲ್ಲಿಯೇ ಬದುಕು ಕಟ್ಟಿಕೊಳ್ಳುವ ಇವರಲ್ಲಿ ಸದ್ಯ ಎದುರಾಗಿರುವ ಅತಂತ್ರ ಸ್ಥಿತಿ, ಭವಿಷ್ಯದ ಬಗ್ಗೆ ಆತಂಕ ಹುಟ್ಟಿಸಿದೆ. ಅರೆಬರೆ ಮನೆಗಳು: ನೆರೆಗೆ ಕಚ್ಚಿಹೋದ, ಸಂಪೂರ್ಣ ಕುಸಿದ ಮನೆಗಳ ಪುನರ್ ನಿರ್ಮಾಣಕ್ಕಾಗಿ ರಾಜ್ಯ ಸರಕಾರ ತಲಾ ಐದು ಲಕ್ಷ ರೂಪಾಯಿ ಘೋಷಿಸಿದ್ದು, ಕೆಲವರಿಗೆ ಮೊದಲ ಕಂತಿನ ಒಂದು ಲಕ್ಷ ಪಾವತಿಯಾಗಿದೆ. ಆದರೆ, ಎರಡನೇ ಕಂತಿನ ಹಣಕ್ಕೆ ಮನವಿ ಸಲ್ಲಿಸುವ ಹೊತ್ತಿಗೆ ಕೊರೋನ ಬಂದು ಕಾಮಗಾರಿ ಆಡಳಿತ ಎಲ್ಲವನ್ನೂ ಲಾಕ್‌ಡೌನ್ ಆಗಿದ್ದರಿಂದ ಆ ಮನೆಗಳು ಅರೆಬರೆಯಾಗಿ ನಿಂತಿವೆ.
ಉತ್ತರಕರ್ನಾಟಕ ವ್ಯಾಪ್ತಿಯ ಹಲವು ಜಿಲ್ಲೆಗಳಲ್ಲಿ ಈವರೆಗೂ ಒಂದು ಮನೆಯೂ ಸರಿಯಾಗಿ ಪೂರ್ತಿಯಾಗಿಲ್ಲ. ಅಲ್ಲದೆ, ಎಲ್ಲ ಕಾಮಗಾರಿಗಳೂ ಸ್ಥಗಿತವಾಗಿವೆ. ಬಹುತೇಕ ನೆರೆ ಸಂತ್ರಸ್ತರ ಸ್ಥಿತಿಯೂ ಭಿನ್ನವಾಗಿಲ್ಲ. ಇನ್ನು ಲಾಕ್‌ಡೌನ್ ತೆರವಾದರೂ ಈ ಮನೆಗಳ ಕಾಮಗಾರಿ ಆರಂಭಿಸಲು ಸಂತ್ರಸ್ತರ ಬಳಿ ಹಣವಿಲ್ಲ. ಸರಕಾರವೂ ಕೊರೋನ ನಿಯಂತ್ರಣಕ್ಕೆ ಆದ್ಯತೆ ನೀಡಿರುವ ರಾಜ್ಯ ಸರಕಾರದ ಖಜಾನೆಯೂ ಖಾಲಿಯಾಗಿದ್ದರಿಂದ ಮುಂದಿನ ಕಂತಿನ ಹಣ ಬಿಡುಗಡೆಯಾಗುವ ಭರವಸೆಯೂ ಇಲ್ಲದಂತಾಗಿದೆ.
ಮಳೆಗಾಲ ಆರಂಭವಾದರೆ ಗತಿಯೇನು?
ಕೊರೋನ ಮಧ್ಯೆ ನೆರೆ ಸಂತ್ರಸ್ತರಲ್ಲಿ ಮುಂಗಾರು ಮಳೆಯ ಆತಂಕ ಶುರುವಾಗಿದೆ. ಯುಗಾದಿಯ ಬಳಿಕ ಅಲ್ಲಲ್ಲಿ ಮುಂಗಾರಿನ ಮೊದಲ ಮಳೆ ಸುರಿದಿದ್ದು, ಬಿತ್ತನೆಗೆ ಹದವಾಗುವ ದೊಡ್ಡ ಮಳೆಗಳು ಮೇ ಮೊದಲ ವಾರದಲ್ಲಿ ಆರಂಭವಾಗುತ್ತವೆ. ನಾಲ್ಕಾರು ದಿನ ಅವು ಬಿಟ್ಟೂ ಬಿಡದೇ ಸುರಿದ ನಿದರ್ಶನಗಳಿವೆ. ಒಂದು ವೇಳೆ ನಿರಂತರ ಮಳೆ ಸುರಿದರೆ ಯಾವ ಆಸರೆಗೆ ನಿಲ್ಲುವುದು ಎಂಬ ಆತಂಕ ಆರಂಭವಾಗಿದೆ. ಕಳೆದ ಹಿಂಗಾರಿನಲ್ಲಿ ಹೊಲದಿಂದ ಯಾವುದೇ ಬೆಳೆ ಬಂದಿಲ್ಲ. ಮಳೆಗೆ ಕೊಚ್ಚಿ ಹೋದ ಮನೆಯೂ ಇನ್ನೂ ನಿರ್ಮಾಣವಾಗಿಲ್ಲ. ಕೊರೋನ ಭಯದಿಂದ ಗುಡಿಸಲುಗಳಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಮುಂಗಾರು ಅಬ್ಬರಿಸಿದ್ದು, ದಿಕ್ಕು ತೋಚುತ್ತಿಲ್ಲ ಎಂದು ನೆರೆ ಸಂತ್ರಸ್ತರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರವಾಹದಿಂದ ಮನೆಗಳು ಬಿದ್ದು, ಹಾಳಾಗಿ ಮೂರು-ನಾಲ್ಕು ತಿಂಗಳು ಕುಟುಂಬ ಸಮೇತ ಬೀದಿಗೆ ಬಂದಿದ್ದೇವೆ. ಇಷ್ಟು ದಿನ ಪರಿಹಾರ ಕೇಂದ್ರದಲ್ಲಿ ಇದ್ದೆವು. ಇನ್ನೇನು ಮನೆ ಕಟ್ಟಿಕೊಳ್ಳಬಹುದು ಎಂದುಕೊಳ್ಳುತ್ತಿದ್ದಂತಹ ಸಂದರ್ಭದಲ್ಲಿ ಈ ಕೊರೋನ ಬಂದಿದೆ. ಮುಂದೆ ಏನು ಮಾಡಬೇಕಂತ ದಾರಿಕಾಣದಾಗಿದೆ. ಸರಕಾರ ನಮ್ಮ ಕಷ್ಟವನ್ನೂ ನೋಡಬೇಕು. ತಿನ್ನೋದಕ್ಕೆ, ಉಳಿದುಕೊಳ್ಳೋದಕ್ಕೆ ವ್ಯವಸ್ಥೆ ಮಾಡಬೇಕು.
ರಾಮಣ್ಣ, ನೆರೆಸಂತ್ರಸ್ತ
► 15ಕ್ಕೂ ಅಧಿಕ ಜಿಲ್ಲೆಗಳ ಸಾವಿರಾರು ಸಂತ್ರಸ್ತ ಕುಟುಂಬಗಳು ಇನ್ನೂ ದಯನೀಯ ಸ್ಥಿತಿಯಲ್ಲಿವೆ
► ನಿರೀಕ್ಷಿತ ಪ್ರಮಾಣದಲ್ಲಿ ಸಫಲವಾಗದ ಸರಕಾರದ ನೆರವು
► ಸ್ಥಗಿತಗೊಂಡಿರು ಮನೆ ನಿರ್ಮಾಣ ಕಾಮಗಾರಿ







