ಕೊರೋನ ಜತೆ ಕಾಡುತ್ತಿದೆ ಮಲೇರಿಯಾ, ಡೆಂಗ್ ಭೀತಿ !

ಮಂಗಳೂರು, ಎ.18: ಸದ್ಯ ಕೊರೋನ ಸೋಂಕು ಎಲ್ಲೆಡೆ ಸುದ್ದಿಯಲ್ಲಿದೆ. ಸೋಂಕಿನ ಆತಂಕದ ಜತೆಯಲ್ಲೇ ಸಾರ್ವಜನಿಕ ಬದುಕಿನ ಕತ್ತನ್ನೇ ಹಿಸುಕುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ದಿನಗಳ ಬಳಿಕ ನಿನ್ನೆ ಮತ್ತೆ ಒಂದು ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇದರ ಜತೆಯಲ್ಲೇ ಇದೀಗ ಬಹು ಮುಖ್ಯವಾಗಿ ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಪ್ರತಿ ವರ್ಷ ಕಾಡುವ ಮಲೇರಿಯಾ ಹಾಗೂ ಡೆಂಗ್ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಕಳೆದ ಹಲವು ವರ್ಷಗಳಿಂದ ಅತೀ ಹೆಚ್ಚು ಮಲೇರಿಯಾ ಪ್ರಕರಣಗಳು ವರದಿಯಾಗುತ್ತಿದ್ದ ಮಂಗಳೂರಿನಲ್ಲಿ ಕಳೆದ ವರ್ಷ ಡೆಂಗ್ ಭೀತಿ ಇನ್ನಿಲ್ಲದಂತೆ ಕಾಡಿತ್ತು. ಈಗ ಮತ್ತೆ ಕಳೆದ ವಾರ ಉಳ್ಳಾಲ ಯುವತಿಯೊಬ್ಬರು ಡೆಂಗ್ ಜ್ವರಕ್ಕೆ ಬಲಿಯಾಗಿದ್ದು, ಇದೀಗ ಮಳೆಗಾಲ ಹತ್ತಿರವಾಗುತ್ತಿರುವಂತೆಯೇ ನಗರದಲ್ಲಿ ಡೆಂಗ್ ಹಾಗೂ ಮಲೇರಿಯಾ ಭೀತಿ ಎದುರಾಗಿದೆ.
ಕಳೆದ ವರ್ಷ ಡೆಂಗ್‌ಗೆ 13 ಮಂದಿ ಮೃತಪಟ್ಟಿದ್ದರು. ಕಳೆದ ಕೆಲ ವರ್ಷಗಳಲ್ಲಿ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯಲ್ಲಿ ಡೆಂಗ್‌ನಂಥ ಜ್ವರ ಬಾಧೆಯಿಂದ ಸಾವು ಸಂಭವಿಸಿತ್ತು. 2018ರಲ್ಲಿ ಸುಮಾರು ಏಳು ಮಂದಿ ಡೆಂಗ್‌ಗೆ ಮೃತಪಟ್ಟಿದ್ದರು. ಡೆಂಗ್ ಮುಖ್ಯವಾಗಿ ನಿಂತ ಶುದ್ಧ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆ ಮೂಲಕ ಹರಡುವ ಸಾಂಕ್ರಾಮಿಕ ರೋಗ. ಕಳೆದ ವರ್ಷ ಜಿಲ್ಲಾಡಳಿತ ಡೆಂಗ್ ನಿಯಂತ್ರಣಕ್ಕೆ ಸಂಬಂಧಿಸಿ ಅಭಿಯಾನದ ರೂಪದಲ್ಲಿ ದಿಟ್ಟ ಹೆಜ್ಜೆ ಇರಿಸಿದ ಪರಿಣಾಮವಾಗಿ, ಸಾಕಷ್ಟು ಮಟ್ಟಿಗೆ ನಿಯಂತ್ರಣ ಸಾಧ್ಯವಾಗಿತ್ತು.
ಈ ಬಾರಿಯೂ ಜೂನ್ ಮೊದಲ ವಾರ ಮುಂಗಾರು ಮಳೆ ಆರಂಭವಾಗಲಿದೆ ಎಂಬುದಾಗಿ ಹವಾಮಾನ ಇಲಾಖೆ ಸೂಚನೆ ನೀಡಿದೆ. ಇದೇ ವೇಳೆ ದ.ಕ. ಜಿಲ್ಲೆಯಾದ್ಯಂತ ಅಲ್ಲಲ್ಲಿ ಅಲ್ಪಸ್ವಲ್ಪ ಮಳೆಯಾಗುತ್ತಿದೆ. ಇಂದು ಬೆಳಗ್ಗಿನ ಜಾವ ಮಂಗಳೂರು ನಗರ ಭಾಗದಲ್ಲಿಯೂ ಅಲ್ಪ ಮಳೆಯಾಗಿದೆ. ಡೆಂಗ್ ಹರಡುವ ಸೊಳ್ಳೆಗಳು ಲಾರ್ವಾ ಉತ್ಪತ್ತಿಗೆ ಅಲ್ಪಸ್ವಲ್ಪ ನಿಂತ ನೀರು ಸಾಕಾಗುತ್ತದೆ. ಹಾಗಾಗಿ ಮನೆಯ ಸುತ್ತಮುತ್ತ, ಕಟ್ಟಡಗಳ ಆವರಣದಲ್ಲಿ, ತಾರಸಿ ಮೇಲೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವ ಮೂಲಕ ಡೆಂಗ್‌ನಂತಹ ಸಾಂಕ್ರಾಮಿಕ ರೋಗವನ್ನು ಜವಾಬ್ಧಾರಿಯುತ ನಾಗರಿಕರಿಂದಲೇ ನಿಯಂತ್ರಣ ಸಾಧ್ಯ.
2019ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1539ಕ್ಕೂ ಅಧಿಕ ಮಂದಿ ಡೆಂಗೆ ಬಾಧಿತರಾಗಿದ್ದರು. ಇದನ್ನು ನಿಭಾಯಿಸಿ ನಿಯಂತ್ರಣಕ್ಕೆ ತರುವುದೇ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿತ್ತು. ರಾಜ್ಯದಲ್ಲಿ ದಕ್ಷಿಣ ಕನ್ನಡ ಹೊರತುಪಡಿಸಿದರೆ ಅತೀ ಹೆಚ್ಚು ಡೆಂಗೆಗೆ ಬಲಿಯಾದದ್ದು ಬೆಂಗಳೂರಿನಲ್ಲಿ. ಉಳಿದ ಜಿಲ್ಲೆಗಳಲ್ಲೂ ಡೆಂಗೆ ದೊಡ್ಡ ಮಟ್ಟದಲ್ಲಿ ಕಾಡಿತ್ತು.
ಸದ್ಯ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಈಗಾಗಲೇ ಮೇ 3ರವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದೆ. ಮೇ 20ರಿಂದ ಲಾಕ್‌ಡೌನ್‌ನಲ್ಲಿ ಕೊಂಚ ವಿನಾಯಿತಿ ದೊರಕಬಹುದಾದರೂ ಬಹುತೇಕರು ಮನೆಯಲ್ಲೇ ಸುರಕ್ಷಿತವಾಗಿ ಉಳಿಯಬೇಕಾಗಿದೆ. ಈ ಸಂದರ್ಭದಲ್ಲಿ ನಮ್ಮ ಮನೆಯ ಸುತ್ತ ಮುತ್ತ ನಿಂತ ನೀರಿನ ಬಗ್ಗೆಯೂ ಗಮನ ಹರಿಸಿ ಶುಚಿತ್ವಕ್ಕೆ ಗಮನ ಹರಿಸುವುದು ಅತ್ಯಗತ್ಯ. ಟೆರೇಸ್ ಮೇಲೆ, ಹೂಕುಂಡ, ಬಿಸಾಡಿದ ಗೆರಟೆ, ಪ್ಲಾಸ್ಟಿಕ್ ಬಾಟಲಿಗಳು, ಮನೆಯೊಳಗಿನ ಅಕ್ವೇರಿಯಂ ಸೇರಿದಂತೆ ಯಾವುದರಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕಾಗಿದೆ. ಈ ವಸ್ತುಗಳಲ್ಲಿ ಮಳೆ ನೀರು ನಿಂತರೆ ಲಾರ್ವ ಉತ್ಪತ್ತಿಯಾಗುತ್ತದೆ.
ನಿಂತ ಶುದ್ಧ ನೀರಿನಲ್ಲಿಯೇ ಡೆಂಗ್ ಹರಡುವ ಈಡಿಸ್ ಸೊಳ್ಳೆ ಬಿಳಿ ಬಣ್ಣದಲ್ಲಿ ಹುಳಗಳಂತೆ ಲಾರ್ವ (ಮೊಟ್ಟೆ)ಗಳನ್ನು ಇಡುತ್ತವೆ. ಬಳಿಕ ಇದು ಸೊಳ್ಳೆಗಳಾಗಿ ಮಾರ್ಪಡಾಗುತ್ತದೆ. ನೀರಿನ ಸಂಗ್ರಹಕ್ಕೆ ಅನುಗುಣವಾಗಿ ಒಂದೊಂದು ಕಡೆಗಳಲ್ಲಿ 50ರಿಂದ 2 ಸಾವಿರ ತನಕವೂ ಲಾರ್ವಗಳು ಸೃಷ್ಟಿಯಾಗಬಲ್ಲದು. ಇದನ್ನು ನಾಶ ಮಾಡುವ ಕೆಲಸವಾಗಬೇಕಿದೆ.
ಮಾಡಬೇಕಾದುದು
*ಎಲ್ಲಾ ನೀರಿನ ಟ್ಯಾಂಕ್‌ಗಳು ಮತ್ತು ನೀರು ತುಂಬಿಸಿರುವ ಪಾತ್ರೆಗಳನ್ನು ಮುಚ್ಚಿ.
* ಪ್ರತಿ ವಾರಕ್ಕೊಮ್ಮೆ ನೀರು ತುಂಬಿಸುವ ಮೊದಲು ಬರಿದುಮಾಡಿ, ತೊಳೆದು, ಒಣಗಿಸಿ
* ಯಾವುದೇ ರೀತಿಯಲ್ಲಿ ಜ್ವರ ಇರುವಾಗ ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯುವುದು ಸೂಕ್ತ. ಸೊಳ್ಳೆಗಳು ಕಚ್ಚದಂತೆ ಹಾಸಿಗೆಗೆ ಸೊಳ್ಳೆ ಪರದೆ ಉಪಯೋಗಿಸವುದು ಒಳಿತು.
ಕೊರೋನ ಜತೆ ನಡೆಯುತ್ತಿದೆ ಡೆಂಗ್, ಮಲೇರಿಯಾ ಜಾಗೃತಿ
‘‘ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಂಪಿಡಬ್ಲು ಕಾರ್ಯಕರ್ತರು, 10 ಮಂದಿ ಮೇಲ್ವಿಚಾರಕರು (ಸುಪರ್‌ವೈಸರ್‌ಗಳು) ಕೊರೋನ ಜತೆಯಲ್ಲೇ ಮಲೇರಿಯಾ ಹಾಗೂ ಡೆಂಗ್ ಜಾಗೃತಿ ಕಾರ್ಯವನ್ನೂ ನಡೆಸುತ್ತಿದ್ದಾರೆ. ವಾರ್ಡ್‌ಗಳ ಮನೆಗಳಿಗೆ ಭೇಟಿ ನೀಡುವ ಸಂದರ್ಭ ಅವರು ಮನೆ ಹಾಗೂ ಸುತ್ತ ಸುತ್ತಲಿನ ಸ್ವಚ್ಛತೆ ಬಗ್ಗೆ ಗಮನ ಹರಿಸಿ ಜನರಿಗೆ ಮಾಹಿತಿ ನೀಡುತ್ತಿದ್ದಾರೆ. ಈಗಾಗಲೇ ನಗರದ ಬಿಜೈ, ಸುರತ್ಕಲ್ ಮೊದಲಾದ ಪ್ರಮುಖ ಪ್ರದೇಶಗಳಲ್ಲಿ ಈ ಕುರಿತು ಸರ್ವೆ, ಸ್ವಚ್ಛತಾ ಕಾರ್ಯ ಆರಂಭವಾಗಿದೆ’’
* ಡಾ. ಸಂತೋಷ್ ಕುಮಾರ್, ಜಂಟಿ ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ







