ತಣ್ಣೀರುಬಾವಿ: ಕೊಲೆ ಪ್ರಕರಣದ ಆರೋಪಿಯ ಕೊಲೆಯತ್ನ
ಮಂಗಳೂರು, ಎ.18: ನಗರದ ಹೊರವಲಯದ ತಣ್ಣೀರುಬಾವಿಯ ಗಣೇಶಕಟ್ಟೆ ಬಳಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಧೀರಜ್ ಪೂಜಾರಿ (27) ಎಂಬಾತನನ್ನು ಐದು ಮಂದಿಯ ತಂಡವೊಂದು ಶುಕ್ರವಾರ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.
ರೌಡಿ ಶೀಟರ್ ಭರತೇಶ್ ಸಹೋದರ ಶಿವರಾಜ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಧೀರಜ್ ಪೂಜಾರಿಯನ್ನು ತಂಡವೊಂದು ಕೊಲೆಗೆ ಯತ್ನಿಸಿದೆ. ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದ ಧೀರಜ್ ಪೂಜಾರಿ ಶುಕ್ರವಾರ ತಣ್ಣೀರುಬಾವಿ ಗಣೇಶಕಟ್ಟೆ ಬಳಿಯ ತನ್ನ ಮನೆಯ ಹತ್ತಿರ ನಿಂತಿದ್ದಾಗ ಸ್ಕ್ರೂಡೈವರ್ ನವೀನ್, ಸುನೀಲ್ ಹಾಗು ಇತರ ಮೂವರ ತಂಡವು ಕೊಲೆಗೆ ಯತ್ನಿಸಿದೆ ಎಂದು ಆರೋಪಿಸಲಾಗಿದೆ. ಈ ಸಂದರ್ಭ ಧೀರಜ್‌ನ ತಾಯಿ ಹಾಗು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.
2018ರ ಜ.22ರ ಮುಂಜಾನೆ ರೌಡಿಶೀಟರ್ ಭರತೇಶ್ ಸಹೋದರ ಶಿವರಾಜ್‌ನನ್ನು ಸ್ಥಳೀಯ ಕೆಲವು ಮಂದಿ ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಧೀರಜ್ ಪೂಜಾರಿ, ಸುನೀಲ್, ಗದಗ ಮೂಲದ ಮಲ್ಲೇಶ್ ಎಂಬವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.





