ಒಮಾನ್ ನ ‘ಜನಸಾಮಾನ್ಯರ ವೈದ್ಯ’ ಡಾ.ರಾಜೇಂದ್ರನ್ ನಾಯರ್ ಕೊರೋನ ವೈರಸ್ ಗೆ ಬಲಿ

ಮಸ್ಕತ್: ‘ಜನಸಾಮಾನ್ಯರ ಡಾಕ್ಟರ್' ಎಂದೇ ಗುರುತಿಸಲ್ಪಟ್ಟಿದ್ದ ಹಾಗೂ ಒಮಾನ್ ನಲ್ಲಿ ನೂರಾರು ಭಾರತೀಯ ವಲಸಿಗರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿದ್ದ ಭಾರತೀಯ ಮೂಲದ ವೈದ್ಯ ಡಾ. ರಾಜೇಂದ್ರನ್ ನಾಯರ್ ಅವರು ಕೊರೋನ ವೈರಸ್‍ಗೆ ತುತ್ತಾಗಿ ಬಲಿಯಾಗಿದ್ದಾರೆ.
ರುವಿ ಎಂಬಲ್ಲಿ ಅಬು ಹನಿ ಮೆಡಿಕಲ್ ಕ್ಲಿನಿಕ್ ನಡೆಸುತ್ತಿದ್ದ ಅವರು ಒಮಾನ್ ನಲ್ಲಿ ನಾಲ್ಕು ದಶಕಗಳಿಗಿಂತಲೂ ಹೆಚ್ಚಿನ ಅವಧಿಯಿಂದ ನೆಲೆಸಿದ್ದರು.
“ಅವರ ಕ್ಲಿನಿಕ್ ಸದಾ ಜನರಿಂದ ತುಂಬಿರುತ್ತಿತ್ತು. ಅವರ ಶುಲ್ಕ ಕೂಡ ಕಡಿಮೆಯಾಗಿತ್ತು'' ಎಂದು ಮಸ್ಕತ್ ನ ಇಂಡಿಯನ್ ಸೋಶಿಯಲ್ ಕ್ಲಬ್ ನ ಸಮುದಾಯ ಕಲ್ಯಾಣ ಕಾರ್ಯದರ್ಶಿ ಪಿ ಎಂ ಜಾಬಿರ್ ಹೇಳುತ್ತಾರೆ. ಸಾಮಾನ್ಯವಾಗಿ ಒಂದು ರಿಯಾಲ್ ಅಥವಾ 500 ಬೈಝಾ ಶುಲ್ಕ ವಿಧಿಸುತ್ತಿದ್ದ ಅವರು ತಮ್ಮ ರೋಗಿಗಳಿಗೆ ಅದನ್ನು ಪಾವತಿಸಲು ಸಾಧ್ಯವಿಲ್ಲವೆಂದಾದೆರ ಶುಲ್ಕ ಬೇಡ ಎನ್ನುತ್ತಿದ್ದರು ಎಂದು ಜಾಬಿರ್ ವಿವರಿಸುತ್ತಾರೆ.
ಡಾ. ನಾಯರ್ ಅವರಿಗೆ ಕೆಲ ದಿನಗಳ ಹಿಂದೆ ಕೊರೋನ ಸೋಂಕು ತಗಲಿದ್ದಾಗ ಅವರನ್ನು ಅಲ್ ನಹ್ಡಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅಲ್ಲಿಂದ ಅವರನ್ನು ರಾಯಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.





