ಚಿಕ್ಕಮಗಳೂರು: ಸಿಡಿಲು ಬಡಿದು ಮೂವರು ಮಹಿಳಾ ಕಾರ್ಮಿಕರು ಮೃತ್ಯು

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು, ಎ.18: ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಮಹಿಳಾ ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬಾಳೆಹೊಳೆ ಸಮೀಪದ ಹಿತ್ಲುಮಕ್ಕಿ ಎಂಬಲ್ಲಿ ಶನಿವಾರ ಸಂಜೆ ವರದಿಯಾಗಿದೆ.
ಮೃತರನ್ನು ಜ್ಯೋತಿ(28), ಮಾದಮ್ಮ(65) ಹಾಗೂ ಮಾರಿ(27) ಎಂದು ಗುರತಿಸಲಾಗಿದ್ದು, ಎಲ್ಲ ಮಹಿಳಾ ಕಾರ್ಮಿಕರು ತಮಿಳುನಾಡು ಮೂಲದವರೆಂದು ತಿಳಿದು ಬಂದಿದೆ. ಮೃತರ ಪೈಕಿ ಮಾದಮ್ಮ ಹಾಗೂ ಜ್ಯೋತಿ ತಾಯಿ ಮಗಳಾಗಿದ್ದು, ಮಾರಿ ಇವರ ಸಂಬಂಧಿಯಾಗಿದ್ದಾರೆ.
ಮೃತರ ಕಟುಂಬದವರು ತಮಿಳುನಾಡು ರಾಜ್ಯದ ಸೇಲಂ ಧರ್ಮಪುರಿ ಜಿಲ್ಲೆಯ ಪಾಪರೆಟ್ಟಿ ತಾಲೂಕಿನವವರು. ಕೆಲ ತಿಂಗಳ ಹಿಂದೆ 14 ಕಾರ್ಮಿಕರ ಕುಟುಂಬಗಳು ತಮಿಳುನಾಡಿನ ಪಾಪರೆಟ್ಟಿಯಿಂದ ಜಿಲ್ಲೆಯ ಕಾಫಿ ತೋಟಗಳಲ್ಲಿ ಕಾಫಿ ಕಟಾವು ಕೆಲಸಕ್ಕೆಂದು ವಲಸೆ ಬಂದಿದ್ದರು. ಕಳಸ ಪಟ್ಟಣ ಸಮೀಪದ ಬಾಳೆಹೊಳೆಯ ಹಿತ್ಲುಮಕ್ಕಿ ಗಜೇಂದ್ರ ಎಂಬವರ ಕಾಫಿ ತೋಟದಲ್ಲಿ ಕೆಲ ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದ ಈ ಕಾರ್ಮಿಕರು ಲಾಕ್ಡೌನ್ ಪರಿಣಾಮ ತಮಿಳುನಾಡಿಗೆ ಹಿಂದಿರುಗಲಾಗಿರಲಿಲ್ಲ. ಆದ್ದರಿಂದ ಕಾರ್ಮಿಕರು ತೋಟದಲ್ಲಿ ಕಾರ್ಮಿಕರ ಲೈನ್ ಮನೆಗಳಲ್ಲಿ ವಾಸಿಸುತ್ತಿದ್ದರೆಂದು ತಿಳಿದು ಬಂದಿದೆ.
ಶನಿವಾರ ಸಂಜೆ ಮಲೆನಾಡು ಭಾಗದಲ್ಲಿ ಗುಡುಗು, ಸಿಡಿಲು, ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಈ ವೇಳೆ ಹಿತ್ಲುಮಕ್ಕಿ ಗ್ರಾಮದ ಲೈನ್ ಮನೆಗಳ ಮುಂದೆ ನಿಂತಿದ್ದ ಮೂವರು ಮಹಿಳೆರಿಗೆ ಸಿಡಿಲು ಬಡಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಮೂವರನ್ನು ಕಳಸ ಪಟ್ಟಣದ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಸಿಡಿಲು ಬಡಿದು ಮೃತಪಟ್ಟಿರುವ ಕಾರ್ಮಿಕರೆಲ್ಲರೂ ಹಿತ್ಲುಮಕ್ಕಿ ಗ್ರಾಮದ ಕಾಫಿ ತೋಟದಲ್ಲಿ ಮೂರು ತಿಂಗಳಿನಿಂದ ಕೂಲಿ ಕೆಲಸ ಮಾಡಿಕೊಂಡಿದ್ದರು. ಇವರೆಲ್ಲೂ ತಮಿಳುನಾಡು ರಾಜ್ಯದಿಂದ ಕೂಲಿ ಅರಸಿ ಬಂದಿದ್ದ ವಲಸೆ ಕಾರ್ಮಿಕರಾಗಿದ್ದಾರೆ. ಇವರೊಂದಿಗೆ ಇನ್ನೂ ಕೆಲ ಕಾರ್ಮಿಕರು ಅಲ್ಲಿಗೆ ಕೆಲಸಕ್ಕೆ ಬಂದಿದ್ದಾರೆ. ಲಾಕ್ಡೌನ್ನಿಂದಾಗಿ ಅಲ್ಲಿಗೆ ಹಿಂದಿರುಗಲಾಗಿಲ್ಲ. ಮೂವರು ಕಾರ್ಮಿಕರ ಮೃತದೇಹಗಳನ್ನು ತಮಿಳುನಾಡಿಗೆ ಕಳಿಸಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಇವರೊಂದಿಗಿದ್ದ ಎಲ್ಲ ಕಾರ್ಮಿಕರನ್ನೂ ತಮಿಳುನಾಡಿಗೆ ಕಳುಹಿಸಲಾಗುವುದು.
- ಹರೀಶ್ ಪಾಂಡೆ, ಎಸ್ಪಿ







