ಬಿಕ್ಕಟ್ಟಿನ ಸಮಯದಲ್ಲಿ ಜವಾಬ್ದಾರಿಯುತ ವಿಪಕ್ಷ ಹೇಗೆ ವರ್ತಿಸಬೇಕೆಂದು ರಾಹುಲ್ ತೋರಿಸಿಕೊಟ್ಟಿದ್ದಾರೆ
ಶಿವಸೇನೆ ಶ್ಲಾಘನೆ

ಮುಂಬೈ: ಕೊರೋನ ವೈರಸ್ ನಿಂದ ಎದುರಾಗಿರುವ ಸಮಸ್ಯೆ ಕುರಿತಂತೆ ರಾಹುಲ್ ಗಾಂಧಿ ತಾಳಿರುವ ಅಭಿಪ್ರಾಯಕ್ಕೆ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಶಿವಸೇನೆ, ಇಂತಹ ಒಂದು ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಒಂದು ಜವಾಬ್ದಾರಿಯುತ ವಿಪಕ್ಷ ಹೇಗೆ ವರ್ತಿಸಬೇಕೆಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದೆ.
ಈ ಕುರಿತಂತೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದಿರುವ ಶಿವಸೇನೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಆವರು ಕೊರೋನ ಹಾವಳಿ ಕುರಿತಂತೆ ಜತೆಯಾಗಿ ಕುಳಿತು ಚರ್ಚೆ ನಡೆಸಬೇಕೆಂದು ಸಲಹೆ ನೀಡಿದೆ.
“ರಾಹುಲ್ ಗಾಂಧಿ ಕುರಿತಂತೆ ಕೆಲವೊಂದು ಅಭಿಪ್ರಾಯಗಳು ಇರಬಹುದು. ಹಾಗೆ ನೋಡಿದರೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕುರಿತಂತೆಯೂ ಕೆಲವು ಅಭಿಪ್ರಾಯಗಳಿವೆ. ಬಿಜೆಪಿಯ ಅರ್ಧ ಯಶಸ್ಸು ರಾಹುಲ್ ಗಾಂಧಿ ಅವರ ವರ್ಚಸ್ಸಿಗೆ ಧಕ್ಕೆ ತರುವ ಮೂಲಕ ಬಂದಿದೆ. ಅದು ಈಗಲೂ ಮುಂದುವರಿದಿದೆ. ಆದರೆ ರಾಹುಲ್ ಗಾಂಧಿಯವರು ಈಗ ತಳೆದಿರುವ ನಿಲುವಿಗೆ ಅವರನ್ನು ಶ್ಲಾಘಿಸಬೇಕು. ಇಂತಹ ಸಂದರ್ಭದಲ್ಲಿ ಹೇಗೆ ವರ್ತಿಸಬೇಕೆಂಬುದರ ಬಗ್ಗೆ ಅವರು ಒಂದು ಮಾದರಿ ನೀತಿ ಸಂಹಿತೆ ಸೃಷ್ಟಿಸಿದ್ದಾರೆ'' ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.







