ಕೊರೋನ: ಮುಂಬೈ ಕೊಳಗೇರಿಗಳ ಸಾವಿರಾರು ಜನರ ಮೇಲೆ ಮಲೇರಿಯಾ ಔಷಧಿ ಪ್ರಯೋಗಕ್ಕೆ ಸಿದ್ಧತೆ
ಸಾಂದರ್ಭಿಕ ಚಿತ್ರ
ಮುಂಬೈ,ಎ.18: ಕೊರೋನ ವೈರಸ್ ನಿಗ್ರಹಿಸುವಲ್ಲಿ ಪರಿಣಾಮಕಾರಿ ಎಂದು ಪ್ರಚಾರ ಪಡೆದಿರುವ ಮಲೇರಿಯಾ ನಿರೋಧಕ ಔಷಧಿ ಹೈಡ್ರಾಕ್ಸಿಕ್ಲೋರೊಕ್ವೈನ್(ಎಚ್ಸಿಕ್ಯೂ) ಅನ್ನು ಧಾರಾವಿ ಸೇರಿದಂತೆ ಮಹಾನಗರದಲ್ಲಿಯ ಕೊಳೆಗೇರಿಗಳಲ್ಲಿ ಪರೀಕ್ಷೆಗೊಳಪಡಿಸುವ ಯೋಜನೆಯೊಂದಕ್ಕೆ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯು ಅಂತಿಮ ರೂಪವನ್ನು ನೀಡುತ್ತಿದೆ ಎಂದು Bloomberg.com ವರದಿ ಮಾಡಿದೆ.
ಬಿಎಂಸಿಯ ಹೆಚ್ಚುವರಿ ಆಯುಕ್ತ ಸುರೇಶ ಕಾಕಾನಿ ಹೇಳಿರುವಂತೆ ಅಧಿಕಾರಿಗಳು ಎಚ್ಸಿಕ್ಯೂ ಪರೀಕ್ಷೆಗೊಳಪಡಿಸಲು ಜನರ ಗುಂಪುಗಳನ್ನು ಗುರುತಿಸುತ್ತಿದ್ದಾರೆ. ಡೋಸೇಜ್ ಪ್ರಮಾಣದ ಬಗ್ಗೆ ವೈದ್ಯಕೀಯ ತಜ್ಞರೊಡನೆ ಸಮಾಲೋಚನೆ ನಡೆಸಲಾಗುತ್ತಿದ್ದು, ಇನ್ನೊಂದೆರಡು ದಿನಗಳಲ್ಲಿ ನಿರ್ಧಾರವೊಂದನ್ನು ಕೈಗೊಳ್ಳುವ ನಿರೀಕ್ಷೆಯಿದೆ ಎಂದೂ ಕಾಕಾನಿ ತಿಳಿಸಿದ್ದಾರೆ.
ಬಿಎಂಸಿಯ ಈ ಹೆಜ್ಜೆ ವಿಶ್ವವನ್ನೇ ತಲ್ಲಣಿಸಿರುವ ಕೊರೋನ ವೈರಸ್ ಪಿಡುಗಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಆರೋಗ್ಯಾಧಿಕಾರಿಗಳ ಹತಾಶೆ ಮತ್ತು ಅವರ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ಬೆಟ್ಟು ಮಾಡುತ್ತಿದೆ. ಕೊರೋನ ವೈರಸ್ನ್ನು ನಿಗ್ರಹಿಸುವಲ್ಲಿ ಎಚ್ಸಿಕ್ಯೂ ಅಷ್ಟೊಂದು ಪರಿಣಾಮಕಾರಿ ಎನ್ನುವುದು ಈವರೆಗಿನ ಅಧ್ಯಯನಗಳಲ್ಲಿ ಕಂಡು ಬಂದಿಲ್ಲ ಮತ್ತು ಅದು ಹಲವಾರು ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಹೀಗಿದ್ದರೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಎಚ್ಸಿಕ್ಯೂ ಒಂದು ‘ಗೇಮ್ ಚೇಂಜರ್’ ಆಗಿದೆ ಎಂದು ಬಣ್ಣಿಸಿದ್ದಾರೆ. ಇಷ್ಟೇ ಅಲ್ಲ, ಭಾರತಕ್ಕೆ ದುಂಬಾಲು ಬಿದ್ದು ಮಿಲಿಯಗಟ್ಟಲೆ ಎಚ್ಸಿಕ್ಯೂ ಮಾತ್ರೆಗಳನ್ನು ತನ್ನ ದೇಶಕ್ಕೆ ಆಮದು ಮಾಡಿಕೊಂಡಿದ್ದಾರೆ.
‘ಇದು ನಮಗೆ ಒಂದು ಬಾರಿ ಸಿಕ್ಕಿರುವ ಅವಕಾಶವಾಗಿದ್ದು, ವಿಶ್ವವನ್ನು ಕಾಡುತ್ತಿರುವ ಸಾಂಕ್ರಾಮಿಕ ಪಿಡುಗಿಗೆ ಉತ್ತರಗಳನ್ನು ನೀಡಬಹುದು. ಎಚ್ಸಿಕ್ಯೂ ಅನ್ನು ಪರೀಕ್ಷೆಗೊಳಪಡಿಸುವ ಮುನ್ನ ಅದರ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳಲು ನಾವು ಅತ್ಯಂತ ಎಚ್ಚರಿಕೆಯನ್ನು ವಹಿಸಿದ್ದೇವೆ ’ ಎಂದು ಕಾಕಾನಿ ತಿಳಿಸಿದರು.
ಮುಂಬೈ ಭಾರತದಲ್ಲಿಯೇ ಕೊರೋನ ವೈರಸ್ನ ಬೃಹತ್ ಹಾಟ್ಸ್ಪಾಟ್ ಆಗಿದ್ದು, ದೇಶದಲ್ಲಿಯ ಒಟ್ಟು ಸೋಂಕು ಪ್ರಕರಣಗಳ ಶೇ.10ಷ್ಟು ಇಲ್ಲಿಯೇ ವರದಿಯಾಗಿವೆ ಮತ್ತು ಶೇ.25ರಷ್ಟು ಸಾವುಗಳಿಗೆ ಸಾಕ್ಷಿಯಾಗಿದೆ.
ಕೊರೋನ ವೈರಸ್ ಸೋಂಕು ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಎಚ್ಸಿಕ್ಯೂ ನೀಡಿಕೆ ಅಭಿಯಾನವನ್ನು ನಡೆಸಲು ಬಿಎಂಸಿ ಅಧಿಕಾರಿಗಳು ಕೊರೋನ ವೈರಸ್ನ ಅತ್ಯಂತ ಹೆಚ್ಚಿನ ಅಬ್ಬರವಿರುವ ಧಾರಾವಿ ಮತ್ತು ವರ್ಲಿಯ ಕೊಳೆಗೇರಿಗಳನ್ನು ಆಯ್ಕೆ ಮಾಡಿದ್ದಾರೆ. ಎಚ್ಸಿಕ್ಯೂ ಬಳಸಿ ಮುನ್ನೆಚ್ಚರಿಕೆ ಚಿಕಿತ್ಸೆ ಬಿಡಿ,ಕೊರೋನ ವೈರಸ್ ರೋಗಿಗಳಲ್ಲಿ ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುವುದಕ್ಕೇ ಈವರೆಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಹೇಳಿದ ಮೆಡಿಸಿನ್ಸ್ ಸ್ಯಾನ್ಸ್ ಫ್ರಾಂಟಿಯರ್ಸ್ನ ದಿಲ್ಲಿ ಮೂಲದ ಕಾರ್ಯಕರ್ತೆ ಲೀನಾ ಮೆಂಘಾನಿ ಅವರು,ಈ ಮಾತ್ರೆಯನ್ನು ಜನರಲ್ಲಿ ವ್ಯಾಪಕವಾಗಿ ಪರೀಕ್ಷೆಗೊಳಪಡಿಸುವುದರಿಂದ ಯಾವುದೇ ಕಾಯಿಲೆಗಳಿಲ್ಲದವರು ಅಪಾಯಕ್ಕೆ ಗುರಿಯಾಗಬಹುದು. ಫ್ರಾನ್ಸ್ನಲ್ಲಿ ಕೆಲವು ಜನರಲ್ಲಿ ಎಚ್ಸಿಕ್ಯೂ, ವಿಶೇಷವಾಗಿ ಹೆಚ್ಚಿನ ಡೋಸ್ಗಳಲ್ಲಿ ಸೇವಿಸಿದಾಗ ಅಥವಾ ಇತರ ಔಷಧಿಗಳೊಂದಿಗೆ ಅದು ಪ್ರತಿವರ್ತಿಸಿದಾಗ ಎದೆಬಡಿತದ ಸಮಸ್ಯೆಗಳನ್ನುಂಟು ಮಾಡಿರುವುದು ಕಂಡು ಬಂದಿದೆ. ಅದು ಕೊರೋನ ವೈರಸ್ ನಿಗ್ರಹಿಸಲು ನೆರವಾಗುತ್ತದೆಯೇ ಅಥವಾ ಹಾನಿಕಾರಕವೇ ಎಂಬ ಬಗ್ಗೆ ಅನಿಶ್ಚಿತತೆಗಳಿವೆ ಎಂದಿದ್ದಾರೆ.
ಎಚ್ಸಿಕ್ಯೂ ಬಳಕೆ ರೋಗಿಗಳಲ್ಲಿ ಸಾಮಾನ್ಯ ಉಪಚಾರಕ್ಕಿಂತ ಹೆಚ್ಚಿನ ಪರಿಣಾಮವನ್ನುಂಟು ಮಾಡಿದ್ದು ಕಂಡುಬಂದಿಲ್ಲ ಮತ್ತು ಅದು ಅಡ್ಡ ಪರಿಣಾಮ ಗಳನ್ನುಂಟು ಮಾಡುವ ಸಾಧ್ಯತೆಗಳೇ ಹೆಚ್ಚು ಎಂದು ಚೀನಾದಲ್ಲಿ ನಡೆಸಲಾದ ಅಧ್ಯಯನವೊಂದು ತಿಳಿಸಿದೆ.
ಈ ಔಷಧಿಯ ಬಳಕೆಯ ಬಗ್ಗೆ ವಿರೋಧಾಭಾಸದ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವುದರಿಂದ ಬಿಎಂಸಿ ಅಧಿಕಾರಿಗಳು ಹೆಚ್ಚು ಎಚ್ಚರಿಕೆ ವಹಿಸಿದ್ದಾರೆ. ಯಕೃತ್ತು ಮತ್ತು ಹೃದಯಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಯಿರದ 18ರಿಂದ 55 ವರ್ಷ ವಯೋಮಾನದ 50,000 ಜನರನ್ನು ಅವರ ಸಮ್ಮತಿಯ ಮೇರೆಗೆ ಎಚ್ಸಿಕ್ಯೂ ಪರೀಕ್ಷೆಗೊಳಪಡಿಸಲು ಅಧಿಕಾರಿಗಳು ಮೊದಲು ನಿರ್ಧರಿಸಿದ್ದರಾದರೂ,ಇಷ್ಟೊಂದು ದೊಡ್ಡ ಗುಂಪಿನ ಮೇಲೆ ಚಿಕಿತ್ಸಾ ನಂತರದ ನಿಗಾ ಇಡುವುದು ಕಷ್ಟವಾಗುವುದರಿಂದ ಈ ಸಂಖ್ಯೆಯನ್ನೀಗ ತಗ್ಗಿಸಲಾಗಿದೆ ಎಂದು ಅಭಿಯಾನ ಜಾರಿಯ ಹೊಣೆ ಹೊತ್ತಿರುವ ಕಾಕಾನಿ ತಿಳಿಸಿದರು.
ಧಾರಾವಿ ಮತ್ತು ವರ್ಲಿಯ ಈ ಪ್ರದೇಶಗಳನ್ನು ಅವು ಕೊಳೆಗೇರಿಗಳು ಎಂಬ ಕಾರಣಕ್ಕೆ ಆಯ್ಕೆ ಮಾಡಲಾಗಿದೆ ಎನ್ನುವುದನ್ನು ಕಾಕಾನಿ ತಳ್ಳಿ ಹಾಕಿದರು.
4,500 ಆರೋಗ್ಯ ಕಾರ್ಯಕರ್ತರ ತಂಡ
ಸುಮಾರು 4,500 ಆರೋಗ್ಯ ಕಾರ್ಯಕರ್ತರನ್ನು ಈ ಅಭಿಯಾನಕ್ಕೆ ಬಳಸಲಾಗುವುದು. ಪ್ರತಿಯೊಬ್ಬರಿಗೂ 25ರಿಂದ 30 ಮನೆಗಳನ್ನು ವಹಿಸಿಕೊಡಲಾಗುವುದು. ಔಷಧ ಸೇವಿಸಿದವರ ಮೇಲೆ ನಿರಂತರ ನಿಗಾ ವಹಿಸುವ ಜೊತೆಗೆ, ಅಡ್ಡ ಪರಿಣಾಮಗಳನ್ನು ಗುರುತಿಸಲು ಇವರಿಗೆ ತರಬೇತಿ ನೀಡಲಾಗುತ್ತದೆ. ಸಂಬಂಧಿತ ತಜ್ಞರು ಸಲಹೆ ಮತ್ತು ಅನುಮತಿ ನೀಡಿದರೆ ನಾವ್ಯಾಕೆ ಹೊಸ ಸಾಧ್ಯತೆಗಳನ್ನು ಪ್ರಯತ್ನಿಸಬಾರದು. ಸುಮ್ಮನೆ ಕೈಕಟ್ಟಿ ಕೂರುವುದು ಸರಿಯಲ್ಲ ಎಂದು ಸುರೇಶ್ ಕಕಾನಿ ಹೇಳಿದ್ದಾರೆ.