ಕೊರೋನ; ಭಾರತವು ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿ ‘ನರಮೇಧ’ಕ್ಕೆ ಸಮಾನ: ಅರುಂಧತಿ ರಾಯ್

ಫೈಲ್ ಚಿತ್ರ
ಹೊಸದಿಲ್ಲಿ,ಎ.18: ಭಾರತ ಸರಕಾರವು ಮುಸ್ಲಿಮರನ್ನು ದಮನಿಸುವ ತನ್ನ ಅಜೆಂಡಾಕ್ಕೆ ಹೆಚ್ಚಿನ ಒತ್ತು ನೀಡಲು ಕೊರೋನ ವೈರಸ್ ಪಿಡುಗಿನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಖ್ಯಾತ ಲೇಖಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಅರುಂಧತಿ ರಾಯ್ ಗಂಭೀರ ಆರೋಪ ಮಾಡಿದ್ದಾರೆ.
ಸರಕಾರದ ತಂತ್ರವನ್ನು ಅವರು ನಾಝಿಗಳು ‘ಹಾಲೊಕಾಸ್ಟ್’ (ಯಹೂದಿಗಳ ಸಾಮೂಹಿಕ ಹತ್ಯಾಕಾಂಡ) ಸಂದರ್ಭದಲ್ಲಿ ಬಳಸಿದ್ದ ತಂತ್ರಕ್ಕೆ ಹೋಲಿಸಿದ್ದಾರೆ. ಭಾರತ ಸರಕಾರವು ಹಿಂದುಗಳು ಮತ್ತು ಮುಸ್ಲಿಮರ ನಡುವೆ ಉದ್ವಿಗ್ನತೆಯನ್ನು ಪ್ರಚೋದಿಸಲು ಕೊರೋನ ವೈರಸ್ ಪಿಡುಗಿನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಹಿಂದು ರಾಷ್ಟ್ರವಾದಿ ಸರಕಾರದ ಈ ಕಾರ್ಯತಂತ್ರವು ಕೊರೋನ ವೈರಸ್ ಪಿಡುಗನ್ನು ಬಳಸಿಕೊಂಡು ಏನನ್ನೋ ಅದು ಮಾಡಲಿದೆ ಎನ್ನುವುದನ್ನು ಸೂಚಿಸುತ್ತಿದೆ ಮತ್ತು ಇಡೀ ವಿಶ್ವವೇ ಈ ಬಗ್ಗೆ ನಿಗಾ ವಹಿಸಬೇಕಾಗಿದೆ. ಈಗಿನ ಪರಿಸ್ಥಿತಿಯು ನರಮೇಧವು ಸಮೀಪಿಸುತ್ತಿರುವಂತಿದೆ ಎಂದು ಡಿಡಬ್ಲ್ಯು ಡಾಟ್ ಕಾಮ್ಗೆ ನೀಡಿರುವ ಸಂದರ್ಶನದಲ್ಲಿ ರಾಯ್ ಆರೋಪಿಸಿದ್ದಾರೆ.
“ಕೋವಿಡ್-19 ಭಾರತದ ಬಗ್ಗೆ ನಮಗೆಲ್ಲ ತಿಳಿದಿರುವ ವಿಷಯಗಳನ್ನು ಬಹಿರಂಗಗೊಳಿಸಿದೆ. ನಾವು ಕೋವಿಡ್ನಿಂದ ಮಾತ್ರವಲ್ಲ,ದ್ವೇಷದ ಬಿಕ್ಕಟ್ಟಿನಿಂದ ಮತ್ತು ಹಸಿವಿನ ಬಿಕ್ಕಟ್ಟಿನಿಂದಲೂ ನರಳುತ್ತಿದ್ದೇವೆ” ಎಂದಿದ್ದಾರೆ.
ಮುಸ್ಲಿಂ ವಿರೋಧಿ ಸಿಎಎ ವಿರುದ್ಧ ಜನರ ಪ್ರತಿಭಟನೆಗೆ ಉತ್ತರವಾಗಿ ದಿಲ್ಲಿ ಹಿಂಸಾಕಾಂಡದ ಬೆನ್ನಲ್ಲೇ ಮುಸ್ಲಿಮರ ವಿರುದ್ಧ ದ್ವೇಷದ ಬಿಕ್ಕಟ್ಟು ಆರಂಭವಾಗಿದೆ. ಕೋವಿಡ್-19ರ ನೆಪದಲ್ಲಿ ಸರಕಾರವು ಯುವ ವಿದ್ಯಾರ್ಥಿಗಳನ್ನು ಬಂಧಿಸುತ್ತಿದೆ. ವಕೀಲರು, ಹಿರಿಯ ಮಾಧ್ಯಮ ಸಂಪಾದಕರು, ಸಾಮಾಜಿಕ ಹೋರಾಟಗಾರರು ಮತ್ತು ಬುದ್ಧಿಜೀವಿಗಳ ವಿರುದ್ದ ಕಾಳಗಕ್ಕಿಳಿದಿದೆ. ಅವರಲ್ಲಿ ಕೆಲವರನ್ನು ಇತ್ತೀಚಿಗೆ ಜೈಲಿಗೂ ತಳ್ಳಲಾಗಿದೆ ಎಂದು ರಾಯ್ ಹೇಳಿದ್ದಾರೆ.
ಸರಕಾರವು ಕೊರೋನ ವೈರಸ್ ಬಿಕ್ಕಟ್ಟಿನ ದುರುಪಯೋಗ ಮಾಡಿಕೊಳ್ಳುತ್ತಿರುವುದು ಹಾಲೊಕಾಸ್ಟ್ ಸಂದರ್ಭದಲ್ಲಿ ನಾಝಿಗಳು ಬಳಸಿದ್ದ ತಂತ್ರವನ್ನು ನೆನಪಿಸುತ್ತಿದೆ. ಭಾರತವು ಹಿಂದು ರಾಷ್ಟ್ರವಾಗಬೇಕೆಂದು ಆರೆಸ್ಸೆಸ್ ಹಿಂದೆಯೇ ಹೇಳಿತ್ತು ಮತ್ತು ಅದರ ಸಿದ್ಧಾಂತವಾದಿಗಳು ಭಾರತದ ಮುಸ್ಲಿಮರನ್ನು ಜರ್ಮನಿಯ ಯಹೂದಿಗಳಿಗೆ ಹೋಲಿಸಿದ್ದಾರೆ. ಅವರು ಕೋವಿಡ್ ಅನ್ನು ಬಳಸುತ್ತಿರುವ ರೀತಿಗೂ ಯಹೂದಿಗಳನ್ನು ನಿರ್ಬಂಧಿತ ಪ್ರದೇಶಗಳಲ್ಲಿ ಕೂಡಿ ಹಾಕಲು,ಅವರಿಗೆ ಕಳಂಕ ಹಚ್ಚಲು ಟೈಫಸ್ ರೋಗವನ್ನು ನಾಝಿಗಳು ಬಳಸಿಕೊಂಡಿದ್ದ ರೀತಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ರಾಯ್ ಹೇಳಿದ್ದಾರೆ.







