ಮಂಗಳೂರು ಜೈಲಿನಿಂದ ಚಿಕ್ಕಮಗಳೂರಿಗೆ 40 ಕೈದಿಗಳ ಸ್ಥಳಾಂತರ

ಚಿಕ್ಕಮಗಳೂರು, ಎ.18: ನಗರದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಮಂಗಳೂರು ಕಾರಾಗೃಹದ 40 ಮಂದಿ ಕೈದಿಗಳನ್ನು ಸ್ಥಳಾಂತರಿಸಲಾಗಿದ್ದು, ಶನಿವಾರ ಎರಡು ಕೆಎಸ್ಸಾರ್ಟಿಸಿ ಬಸ್‍ಗಳಲ್ಲಿ ಕೈದಿಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಕರೆತರಲಾಗಿದೆ.
ಸ್ಥಳಾವಕಾಶದ ಕೊರತೆ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿನ ಕೈದಿಗಳನ್ನು ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲಾಗುತ್ತದೆ ಎಂಬ ಸುದ್ದಿಗಳು ಕಳೆದ ಕೆಲ ದಿನಗಳಿಂದ ಮಾಧ್ಯಮಗಳಲ್ಲಿ ಬಿತ್ತರಗೊಂಡಿತ್ತು. ಆದರೆ ಯಾವ ಕಾರಾಗೃಹಗಳಿಗೆ ಕೈದಿಗಳನ್ನು ಸ್ಥಳಾಂತರಿಸಲಾಗುತ್ತದೆ ಎಂಬ ಬಗ್ಗೆ ಸರಕಾರವಾಗಲೀ, ಅಲ್ಲಿನ ಜಿಲ್ಲಾಡಳಿತವಾಗಲೀ ಮಾಹಿತಿ ನೀಡಿರಲಿಲ್ಲ.
ಶನಿವಾರ ಬೆಳಗ್ಗೆ ಜಿಲ್ಲೆಯ ಕೊಟ್ಟಿಗೆಹಾರದಲ್ಲಿರುವ ಚೆಕ್‍ಪೋಸ್ಟ್ ಮೂಲಕ ಪೊಲೀಸ್ ಎಸ್ಕಾರ್ಟ್ ಒದಗಿಸಲಾಗಿದ್ದ ಎರಡು ಸರಕಾರಿ ಸಾರಿಗೆ ಬಸ್‍ಗಳು ಚಿಕ್ಕಮಗಳೂರು ಜಿಲ್ಲೆಯನ್ನು ಪ್ರವೇಶಿಸಿದ್ದು, ಈ ಬಸ್‍ಗಳಲ್ಲಿ ಕೈದಿಗಳನ್ನು ಕರೆ ತರಲಾಗುತ್ತಿದೆ ಎಂಬ ಮಾಹಿತಿ ಯಾರಿಗೂ ತಿಳಿದಿರಲಿಲ್ಲ. ಶನಿವಾರ ನಗರದ ಜಿಲ್ಲಾ ಕಾರಾಗೃಹದ ಆವರಣದಲ್ಲಿ ಕೈದಿಗಳು ಬಸ್‍ನಿಂದ ಇಳಿದಾಗಲೇ ಸರಕಾರಿ ಸಾರಿಗೆ ಬಸ್‍ಗಳಲ್ಲಿ ಮಂಗಳೂರಿನ ಕೈದಿಗಳನ್ನು ಕರೆತಂದ ವಿಷಯ ಬಹಿರಂಗವಾಗಿದೆ.
ಎರಡು ಬಸ್‍ಗಳಲ್ಲಿ ಒಟ್ಟು 40 ಮಂದಿ ಕೈದಿಗಳನ್ನು ಕರೆ ತರಲಾಗಿದ್ದು, ನಗರದ ರಾಮನಹಳ್ಳಿ ಬಡಾವಣೆ ಸಮೀಪದಲ್ಲಿರುವ ಜಿಲ್ಲಾ ಕಾರಾಗೃಹದ ಗೇಟ್‍ನ ಎದುರು ಬಸ್‍ಗಳಿಂದ ಇಳಿದ ಕೈದಿಗಳು ಒಬ್ಬೊಬ್ಬರಾಗಿ ಜೈಲು ಪ್ರವೇಶಿಸಿದರು. ಮಂಗಳೂರು ಜೈಲಿನಲ್ಲಿ ಸ್ಥಳಾವಕಾಶ ಕೊರತೆ ಇರುವುದರಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಕೈದಿಗಳನ್ನು ಬೇರೆ ಜಿಲ್ಲೆಗಳ ಜೈಲುಗಳಿಗೆ ಸ್ಥಳಾಂತರಿಸಲು ಸರಕಾರ ಸರಕಾರ ನಿರ್ಧರಿಸಿತ್ತೆಂದು ತಿಳಿದುಬಂದಿದೆ.
ಮಂಗಳೂರು ಜೈಲಿನಿಂದ ಶನಿವಾರ ಒಟ್ಟು 80 ಮಂದಿ ಕೈದಿಗಳನ್ನು ಸ್ಥಳಾಂತರಿಸಲಾಗಿದ್ದು, ಈ ಪೈಕಿ ತಲಾ 40 ಕೈದಿಗಳನ್ನು ಚಿಕ್ಕಮಗಳೂರು ಹಾಗೂ ಕಾರಾವರ ನಗರಗಳ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರು ನಗರದಲ್ಲಿನ ಕಾರಾಗೃಹದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಸರಕಾರ ಹಾಗೂ ಜಿಲ್ಲಾಡಳಿತದ ನಿರ್ದೇಶನದಂತೆ ಶನಿವಾರ 40 ಕೈದಿಗಳನ್ನು ಚಿಕ್ಕಮಗಳೂರು ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಇಲ್ಲಿನ ಕಾರಾಗೃಹದಲ್ಲಿ ಕೈದಿಗಳಿಗೆ ಅಗತ್ಯವಾಗಿರುವ ಕೊಠಡಿ ಸೇರಿದಂತೆ ಎಲ್ಲ ಮೂಲಸೌಕರ್ಯಗಳಿದ್ದು, ಮಂಗಳೂರಿನಿಂದ ಕರೆ ತರಲಾಗಿರುವ ಕೈದಿಗಳನ್ನು ಜೈಲಿನಲ್ಲಿ ಪ್ರತ್ಯೇಕವಾಗಿರಿಸಲಾಗುವುದು.
- ರಾಕೇಶ್ ಕಾಂಬ್ಳೆ, ಜೈಲು ಅಧಿಕಾರಿ







