ರಾಜ್ಯದಲ್ಲಿ 384 ಕೋವಿಡ್ ಪ್ರಕರಣಗಳು ದಾಖಲು: ಸಚಿವ ಸುರೇಶ್ ಕುಮಾರ್

ಬೆಂಗಳೂರು, ಎ.18: ರಾಜ್ಯದಲ್ಲಿ ಒಟ್ಟಾರೆ 384 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇಂದು ಸಂಜೆ 5ರ ಮಾಹಿತಿಯಂತೆ ಒಟ್ಟಾರೆ 14 ಸಾವನ್ನಪ್ಪಿದ್ದು, 104 ಜನ ಗುಣಮುಖರಾಗಿ ಹಿಂತಿರುಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶನಿವಾರ ಸಂಜೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉಳಿದ ಪ್ರಕರಣಗಳಲ್ಲಿ 263 ಜನರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕಿಸಲಾಗಿದೆ. ಮೂರು ಜನರನ್ನು ತೀವ್ರ ನೀಗಾ ಘಟಕಗಳಲ್ಲಿ ಇರಿಸಲಾಗಿದೆ ಎಂದರು.
ನಿನ್ನೆ ಸಂಜೆ 5 ಗಂಟೆಗೆ ಹೋಲಿಸಿದಲ್ಲಿ ಇಂದು ಒಟ್ಟಾರೆ 25 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ. ಈ ಪ್ರಕರಣಗಳಲ್ಲಿ ಬೆಂಗಳೂರಿನಿಂದ 3, ಮೈಸೂರು-7, ಕಲಬುರಗಿ-2, ಬಾಗಲಕೋಟೆಯಿಂದ 5 ಪ್ರಕರಣಗಳು ವರದಿಯಾಗಿವೆ. ಜಿಲ್ಲಾಡಳಿತಗಳು ಪ್ರಕರಣಗಳ ಬಗ್ಗೆ ತೀವ್ರ ನಿಗಾವಹಿಸಿ ನಿಯಂತ್ರಣ ಕ್ರಮಗಳನ್ನು ಅನುಸರಿಸುತ್ತಿವೆ ಎಂದು ಅವರು ಹೇಳಿದರು.
ರಾಜ್ಯಾದ್ಯಂತ ಒಟ್ಟು 12,413 ವ್ಯಕ್ತಿಗಳನ್ನು ನಿಗಾವಣೆಯಲ್ಲಿಡಲಾಗಿದೆ. ಪರೀಕ್ಷಿಸಲಾಗಿರುವ 19,186 ಮಾದರಿಗಳ ಪೈಕಿ 384 ಮಾದರಿಗಳು ಖಚಿತಗೊಂಡಿವೆ. ಇಲ್ಲಿಯವರೆಗೆ 41,354 ಸಂಖ್ಯೆಯ ಸಂಪರ್ಕಿತ ಆಪ್ತ ಸಮಾಲೋಚನಾ ಸೇವೆಗಳನ್ನು ಸರಕಾರ ನೀಡಿದೆ. ಕೋವಿಡ್ ನಿಯಂತ್ರಣಕ್ಕೆ ಸ್ವ-ಇಚ್ಛೆಯಿಂದ ಟೆಲಿಮೆಡಿಸಿನ್ ಮೂಲಕ ಸೇವೆ ಸಲ್ಲಿಸಲು ಬಯಸುವ ವೈದ್ಯರಿಗೆ ದೂರವಾಣಿ ಸಂಖ್ಯೆ 080-47192219ಗೆ ಮಿಸ್ಡ್‍ಕಾಲ್ ನೀಡಬೇಕು ಎಂದು ಸುರೇಶ್‍ಕುಮಾರ್ ತಿಳಿಸಿದರು.
ಜಾಗರೂಕತೆಯಿಂದ ವರದಿ ಮಾಡಿ
ಎ.16ರಂದು ಪಿ.374 ವ್ಯಕ್ತಿ ತಾವು ಜೊತೆಯಾಗಿ ಬಂದ ಪಿ.306, ಪಿ.308 ವ್ಯಕ್ತಿಗಳಿಗೆ ಸೋಂಕಿದೆಯೆಂಬ ಮಾಹಿತಿ ಮಾಧ್ಯಮಗಳಲ್ಲಿ ಗಮನಿಸಿ ಭಯದ ಕಾರಣ ಹೃದಯಾಘಾತದಿಂದ ನಿಧನ ಹೊಂದಿದ್ದು, ಮಾಧ್ಯಮಗಳು ಇಂತಹ ಅಂಶಗಳ ಬಗ್ಗೆ ಗಮನ ಹರಿಸಿ ಇನ್ನಷ್ಟು ಜಾಗರೂಕರಾಗಿ ವರದಿ ಮಾಡುವಂತೆ ಅವರು ಕೋರಿದರು. ಜನರಿಗೆ ಈ ರೋಗದ ಕುರಿತಂತೆ ಎಚ್ಚರಿಕೆಯಿರಲಿ, ಆತಂಕ ಬೇಡ ಎನ್ನುವ ಸಂದೇಶವನ್ನು ತಲುಪಿಸುವ ವಾಹಕಗಳಾಗಿ ಮಾಧ್ಯಮಗಳು ಕಾರ್ಯನಿರ್ವಹಿಸಬೇಕು ಎಂದು ಸುರೇಶ್ ಕುಮಾರ್ ಮನವಿ ಮಾಡಿದರು.







