ಟಿಕೆಟ್ ಬುಕಿಂಗ್ ಆರಂಭದ ದಿನಾಂಕ ಪ್ರಕಟಿಸಿದ ಏರ್ ಇಂಡಿಯಾ
ಹೊಸದಿಲ್ಲಿ, ಎ.18: ಜೂನ್ 1ರಿಂದ ಅಂತರಾಷ್ಟ್ರೀಯ ವಿಮಾನ ಪ್ರಯಾಣದ ಟಿಕೆಟ್ ಬುಕಿಂಗ್ ಮತ್ತು ಮೇ 4ರಿಂದ ದೇಶೀಯ ವಿಮಾನ ಪ್ರಯಾಣದ ಟಿಕೆಟ್ ಬುಕಿಂಗ್ ಆರಂಭಿಸುವುದಾಗಿ ಸರಕಾರಿ ಸ್ವಾಮ್ಯದ ಏರಿಂಡಿಯಾ ವಿಮಾನಯಾನ ಸಂಸ್ಥೆ ಘೋಷಿಸಿದೆ.
ಮೇ 4ರಿಂದ ಆಯ್ದ ದೇಶೀಯ ಮಾರ್ಗಗಳಲ್ಲಿ (ಮುಂಬೈ, ದಿಲ್ಲಿ, ಕೋಲ್ಕತಾ, ಚೆನ್ನೈ ಮತ್ತು ಬೆಂಗಳೂರು) ವಿಮಾನಯಾನದ ಟಿಕೆಟ್ ಬುಕಿಂಗ್ ಆರಂಭಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಕೊರೋನ ವೈರಸ್ ಸೋಂಕು ಹರಡದಂತೆ ನಿರ್ಬಂಧಕ ಕ್ರಮವಾಗಿ ಮಾರ್ಚ್ 25ರಿಂದ ಎಪ್ರಿಲ್ 14ರವರೆಗೆ ದೇಶದಲ್ಲಿ ಪ್ರಥಮ ಹಂತದ ಲಾಕ್ಡೌನ್ ಘೋಷಿಸಿದ್ದ ಹಿನ್ನೆಲೆಯಲ್ಲಿ ಎಲ್ಲಾ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನ ಸಂಚಾರವನ್ನು ನಿಷೇಧಿಸಲಾಗಿತ್ತು. ಬಳಿಕ ಸರಕಾರ ಲಾಕ್ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಿದೆ.
ಈ ಮಧ್ಯೆ, ಕಡಿಮೆ ದರದಲ್ಲಿ ವಿಮಾನಪ್ರಯಾಣ ಸೇವೆ ಒದಗಿಸುತ್ತಿರುವ ಇಂಡಿಗೊ ಸಂಸ್ಥೆಯೂ ಮೇ 4ರಿಂದ ಹಂತಹಂತವಾಗಿ ಸ್ಥಳೀಯ ವಿಮಾನಯಾನವನ್ನು ಆರಂಭಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಘೋಷಿಸಿದೆ.
Next Story