ಅಸಂಘಟಿತ ವಲಯದ ಕಾರ್ಮಿಕರಿಗೆ ತಲಾ 10 ಸಾವಿರ ರೂ. ಪರಿಹಾರ ನೀಡಿ: ಡಿಕೆಶಿ ಆಗ್ರಹ

ಬೆಂಗಳೂರು, ಎ.18: ಕೊರೋನ ಪರಿಸ್ಥಿತಿ ನಿರ್ವಹಣೆ, ಅಗತ್ಯ ಇರುವವರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಘೋಷಿಸಿದ ಪರಿಹಾರ ಸೂಕ್ತ ರೀತಿಯಲ್ಲಿ ಸಿಗದೆ ಜನ ಸಂಕಟಪಡುತ್ತಿದ್ದಾರೆ. ವೃತ್ತಿಪರ ವರ್ಗದ ಕಾರ್ಮಿಕರ ಬಗ್ಗೆ ಈ ಸರಕಾರಗಳು ಚಕಾರವನ್ನೆ ಎತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆತ್ತನೆ, ಕುಸರಿ, ಕ್ಷೌರಿಕರು, ದರ್ಜಿಗಳು, ಕುಶಲ ಕರ್ಮಿಗಳು, ಬೀಡಿ ಕಟ್ಟುವವರು, ಹಮಾಲಿಗಳು, ಗಾಣಿಗರು, ಮೀನುಗಾರರು, ಕಸ ಗುಡಿಸುವವರು, ಮೆಕಾನಿಕ್‍ಗಳು, ಹೊಟೇಲ್ ಸಪ್ಲೈಯರ್‍ಗಳು, ಕ್ಲೀನರ್, ಮದುವೆ ಮನೆಗಳಲ್ಲಿ ಕೆಲಸ ಮಾಡುವವರು, ಭಟ್ಟರು, ಪೂಜಾರಿಗಳು, ಗುಜರಿ ವ್ಯಾಪಾರಿಗಳು ಸೇರಿದಂತೆ ರಾಜ್ಯದಲ್ಲಿ 1.63 ಕೋಟಿ ಅಸಂಘಟಿತ ವಲಯದ ವೃತ್ತಿ ಕೌಶಲ್ಯದವರು ಕೆಲಸ ಮಾಡುತ್ತಿದ್ದಾರೆ. ಇವರ ಬಗ್ಗೆ ನೀವಾಗಲಿ, ಪ್ರಧಾನಿಯಾಗಲಿ ಒಂದು ಸಾರಿಯಾದರೂ ಯೋಚನೆ ಮಾಡಿದ್ದೀರಾ ಯಡಿಯೂರಪ್ಪನವರೆ? ಎಂದು ಅವರು ಪ್ರಶ್ನಿಸಿದ್ದಾರೆ.
ಸರಕಾರದವರು ಒಂದು ಪೈಸೆ ಪರಿಹಾರಾನೂ ಕೊಟ್ಟಿಲ್ಲ. ಅವರ ಬದುಕೇನು, ಅವರ ಜೀವನ ಏನು, ಅವರಿಗೆ ಆದಾಯ ಎಲ್ಲಿಂದ ಬರಬೇಕು? ಇವರಿಗೆಲ್ಲ ಕೊರೋನ ಸಂಕಷ್ಟ ಮುಗಿಯುವವರೆಗೆ ಸರಕಾರದ ವತಿಯಿಂದ ತಿಂಗಳಿಗೆ 10 ಸಾವಿರ ರೂ.ಪರಿಹಾರ ನೀಡಿ. ಅಭಿವೃದ್ಧಿ ಕಾರ್ಯಕ್ರಮಗಳನ್ನು ನಿಲ್ಲಿಸಿ, ಮತ್ತೆ ಸರ್ವ ಪಕ್ಷಗಳ ಮುಖಂಡರ ಸಭೆ ಕರೆಯಿರಿ. ಇಲ್ಲವೇ, ವಿಧಾನಸಭೆ ಅಧಿವೇಶನ ಕರೆಯಿರಿ ಎಂದು ಶಿವಕುಮಾರ್ ಒತ್ತಾಯಿಸಿದರು.
ಅಸಂಘಟಿತ ಕೂಲಿ ಕಾರ್ಮಿಕರ ಪರವಾಗಿ ನಾನು ಇಂದು ಧ್ವನಿ ಎತ್ತದಿದ್ದರೆ ಈ ಸ್ಥಾನದಲ್ಲಿ ಕೂರಲು ನನಗೆ ಅರ್ಹತೆ ಇರುವುದಿಲ್ಲ. ಈ ವರ್ಗದವರನ್ನು ನೀವು ನರೇಗಾ ಯೋಜನೆಯಡಿ ಸೇರಿಸುತ್ತೀರಾ ಅಥವಾ ಅಸಂಘಟಿತ ವಲಯ ಕಾರ್ಮಿಕರಿಗಾಗಿಯೆ ವಿಶೇಷ ಯೋಜನೆ ಮಾಡುತ್ತೀರೋ ಅದು ನಿಮಗೆ ಬಿಟ್ಟದ್ದು. ಒಟ್ಟಿನಲ್ಲಿ ಇವರಿಗೆ ಸಹಕಾರ ಆಗಬೇಕು ಅಷ್ಟೇ ಎಂದು ಅವರು ಹೇಳಿದರು.
ಹಣ್ಣು, ತರಕಾರಿ, ಸೊಪ್ಪು ಜಮೀನಿನಲ್ಲೆ ಹಾಳಾಗುತ್ತಿದೆ. ದಯವಿಟ್ಟು ಹೋಗಿ ರಕ್ಷಿಸಿ ಎಂದು ಕೇಳಿಕೊಂಡೆ. ಎ.12ರವರೆಗೆ ಯಾವುದೇ ನೋಟಿಫಿಕೇಷನ್ ಹೊರಡಿಸಲಿಲ್ಲ. ಇವತ್ತಿನವರೆಗೂ ತಳಮಟ್ಟದಲ್ಲಿ ತೋಟಗಾರಿಕೆ ಅಧಿಕಾರಿಗಳು ಒಂದು ಅಥವಾ ಎರಡು ಕಡೆ ಮಾತ್ರ ಭೇಟಿ ಕೊಟ್ಟಿರುವುದು ಬಿಟ್ಟರೆ ಬೇರೇನೂ ಆಗಿಲ್ಲ. ಹೀಗಾಗಿ ನಾನು ನಮ್ಮ ಶಾಸಕರಿಗೆ ನಾಶವಾಗುತ್ತಿರುವ ತರಕಾರಿ, ಹಣ್ಣುಗಳನ್ನು ಖರೀದಿಸಿ, ಬಡವರಿಗೆ ಹಂಚಿ. ಆ ಮೂಲಕ ರೈತರ ನೆರವಿಗೆ ಬನ್ನಿ ಎಂದು ಕರೆ ನೀಡಿದೆ ಎಂದು ಅವರು ತಿಳಿಸಿದರು.
ಶಾಸಕರಾದ ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಸಂಸದ ಡಿ.ಕೆ.ಸುರೇಶ್ ಸೇರಿದಂತೆ ನಮ್ಮ ಅನೇಕ ಶಾಸಕರು ಜಮೀನಿಗೆ ಹೋಗಿ ರೈತರಿಂದ ಬೆಳೆ ಖರೀದಿಸುತ್ತಿದ್ದಾರೆ. ತೋಟಗಾರಿಕೆ ಸಚಿವರ ಕ್ಷೇತ್ರಕ್ಕೆ ಹೋಗಿ ತರಕಾರಿ ಖರೀದಿಸಿದ್ದೇವೆ. ಮುಖ್ಯಮಂತ್ರಿಯ ಕ್ಷೇತ್ರದಲ್ಲಿ ವ್ಯಾಪಾರ ಮಾಡಿದ್ದೇವೆ ಎಂದು ಶಿವಕುಮಾರ್ ಹೇಳಿದರು.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಜೂನ್‍ವರೆಗೂ ಶಾಲೆ, ಕಾಲೇಜು ತೆರೆಯುವಂತಿಲ್ಲ, ಆನ್‍ಲೈನ್‍ನಲ್ಲೆ ಪಾಠ ಮಾಡಿ ಅಂತ ಹೇಳಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪಾಠ ಹೇಗ್ರೀ ಸಿಗುತ್ತೆ? ಅವರಿಗೆ ಲ್ಯಾಪ್‍ಟಾಪ್ ಕೊಟ್ಟಿದ್ದೀರಾ? ಇಂಟರ್ ನೆಟ್ ಸಂಪರ್ಕ ಇದೆಯಾ? ಅದನ್ನು ಬಳಸಲು ಅವರಿಗೆ ತಿಳುವಳಿಕೆ ಇದೆಯಾ? ಆನ್‍ಲೈನ್‍ನಲ್ಲಿ ಪರೀಕ್ಷೆಗೆ ಹೇಗೆ ನೋಂದಣಿ ಮಾಡಿಕೊಳ್ಳಲು ಹೇಳುತ್ತೀರಾ ಎಂದು ಅವರು ಪ್ರಶ್ನಿಸಿದರು.
ಕೊರೋನ ಬಗ್ಗೆ ಐಎಂಆರ್‍ಸಿ ಅವರು ಅಂಕಿ ಸಂಖ್ಯೆಗಳನ್ನು ಯಾಕೆ ನೀಡುತ್ತಿಲ್ಲ? ಈ ವಿಚಾರದಲ್ಲಿ ಆರೋಗ್ಯ ಇಲಾಖೆ ಸಚಿವರ ಬಗ್ಗೆ ಮಾತನಾಡಲು ಆಗುವುದಿಲ್ಲ. ಈ ಬಗ್ಗೆ ಏನೆ ಇದ್ದರೂ ಸುರೇಶ್ ಕುಮಾರ್ ಅವರನ್ನು ಕೇಳುವಂತಹ ಪರಿಸ್ಥಿತಿ ಬಂದಿದೆ. ಪ್ರತಿದಿನ ಅವರು ಸಂಖ್ಯೆಯನ್ನು ಪ್ರಕಟಿಸಬೇಕು ಎಂದು ಶಿವಕುಮಾರ್ ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆ 10 ಲಕ್ಷ ಜನಕ್ಕೆ 10 ಸಾವಿರ ಪರೀಕ್ಷೆ ಮಾಡಿ ಅಂತಾರೆ. ನಮ್ಮಲ್ಲಿ ಎಷ್ಟಾಗುತ್ತಿದೆ? ಯಾರು ಮಾಡುತ್ತಿದ್ದಾರೆ? ಡೋರ್ ಟು ಡೋರ್ ಪರೀಕ್ಷೆ ನಡೆಯುತ್ತಿಲ್ಲ. ಪಾರದರ್ಶಕತೆ ಇಲ್ಲವೇ ಇಲ್ಲ. ವೈದ್ಯರಿಗೆ 50 ಲಕ್ಷ ರೂ.ವಿಮೆ ಘೋಷಿಸಿದ್ದಿರಿ. ಅದು ಸರಿಯಾಗಿದೆ. ಅದೇ ರೀತಿ ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರಿಗೆ ಯಾಕೆ ವಿಮೆ ಸೌಲಭ್ಯವಿಲ್ಲ? ಅವರು ಕೂಡ ಹಗಲಿರುಳು ನಮಗಾಗಿ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಅವರಿಗೂ 25 ಅಥವಾ 50 ಲಕ್ಷ ರೂ.ವಿಮೆ ನೀಡಿ ಎಂದು ಅವರು ಒತ್ತಾಯಿಸಿದರು.
.jpg)







