ಲಾಕ್‌ಡೌನ್ ಉಲ್ಲಂಘಿಸಿ ಕಲಬುರಗಿಯಲ್ಲಿ ಮತ್ತೊಂದು ರಥೋತ್ಸವ !: 200ಕ್ಕೂ ಅಧಿಕ ಮಂದಿ ಭಾಗಿ
ತಡವಾಗಿ ಬೆಳಕಿಗೆ ಬಂದ ಘಟನೆ

ಕಲಬುರಗಿ, ಎ.18: ಕೊರೋನ ಭೀತಿಯಿಂದ ದೇಶಾದ್ಯಂತ ಲಾಕ್‌ಡೌನ್ ಇದ್ದರೂ, ನಿಯಮ ಉಲ್ಲಂಘಿಸಿ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರು ಗ್ರಾಮದಲ್ಲಿ ಎ.15 ರಂದು ಹನುಮಾನ್ ದೇವಸ್ಥಾನದ ತೇರು ಎಳೆದಿದ್ದಾರೆ ಎನ್ನಲಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ 15 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಾಕ್‌ಡೌನ್ ಬಗ್ಗೆ ತಿಳಿದಿದ್ದರೂ ಸುಮಾರು 200ಕ್ಕೂ ಹೆಚ್ಚು ಗ್ರಾಮಸ್ಥರು ಈ ರಥೋತ್ಸವದಲ್ಲಿ ಭಾಗವಹಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ರಥೋತ್ಸವ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಆಳಂದ ತಾಲೂಕು ಮಹಾರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿದ್ದು, ಅಲ್ಲಿ ಕೊರೋನ ವೈರಸ್ ಪೀಡಿತರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಈ ಎಲ್ಲದರ ನಡುವೆಯೂ ರಥೋತ್ಸವ ನಡೆದಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಹಿಂದಷ್ಟೇ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮಸ್ಥರು ಸಿದ್ಧಲಿಂಗೇಶ್ವರ ದೇವರ ರಥೋತ್ಸವ ನೆರವೇರಿಸಿದ್ದರು.
"ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ವರದಿ ಸಲ್ಲಿಸುತ್ತೇವೆ. ಪೊಲೀಸ್ ಅಧಿಕಾರಿಗಳು 15 ಜನರ ಮೇಲೆ ಎಫ್ಐಆರ್ ದಾಖಲಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುತ್ತಾರೆ" ಎಂದು ಅಳಂದ ತಾಲೂಕು ತಹಶೀಲ್ದಾರ್ ದಯಾನಂದ ಪಾಟೀಲ ತಿಳಿಸಿದ್ದಾರೆ.
ರಥೋತ್ಸವ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಹದಿನೈದು ಜನರ ಮೇಲೆ ಎಫ್ಐಆರ್ ದಾಖಲಿಸಲಾಗಿದ್ದು, ಮೂರು ಜನರನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ತನಿಖೆ ಪ್ರಗತಿಯಲ್ಲಿದೆ.
-ಸುರೇಶ್ ಕುಮಾರ್ ಚೌಹಾಣ್, ಪಿಎಸ್ಐ, ನಿಂಬರ್ಗಾ ಪೊಲೀಸ್ ಠಾಣೆ







