ಮುಖ್ಯಮಂತ್ರಿಯನ್ನು ಆಕ್ಷೇಪಿಸುವ ಟಿವಿ ನಿರೂಪಕನ ಶೈಲಿ ಸಮ್ಮತಾರ್ಹವಲ್ಲ: ಹಾಜಿ ಅಬ್ದುಲ್ ರಶೀದ್
ಮಂಗಳೂರು : ಲಾಕ್ ಡೌನ್ ನಿಯಮ ಸಡಿಲಿಕೆ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿಲುವನ್ನು ಸಮಯೋಚಿತವಲ್ಲ ಎಂದು ಹೇಳುವ ಭರದಲ್ಲಿ ಟಿವಿ9 ದೃಶ್ಯವಾಹಿನಿಯ ಸುದ್ಧಿ ನಿರೂಪಕ ರಂಗನಾಥ್ ಭಾರಧ್ವಜ್, ರಾಜ್ಯದ ಮುಖ್ಯಮಂತ್ರಿಯನ್ನು ಉದ್ದೇಶಿಸಿ ಹೇಳಿ ಕೊಳ್ಳುವಾಗ, ಒಬ್ಬ ಸಾಮಾನ್ಯ ಆರೋಪಿಯ ಬಗ್ಗೆ ಹೇಳುತ್ತಿರುವಂತೆ ವ್ಯಕ್ತವಾಗಿದೆ ಇದು ಸಮ್ಮತಾರ್ಹವಲ್ಲ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ ಗೌರವವನ್ನು ಪರಿಗಣಿಸದೆ, ಆವೇಶ, ಆಕ್ರೋಶದ ಪದಗಳನ್ನು ಬಳಸಿರುವುದು ಕನ್ನಡ ಜನಕೋಟಿಗೆ ಮಾಡಿದ ಅವಮಾನ ಎಂದು ಹಾಜಿ ಅಬ್ದುಲ್ ರಶೀದ್ ಕಳವಳ ವ್ಯಕ್ತ ಪಡಿಸಿದ್ದಾರೆ.
ಮುಖ್ಯಮಂತ್ರಿಯವರ ನಿರ್ಧಾರ, ಕೊರೋನ ವೈರಸಿನ ಹತೋಟಿಗೆ ಪೂರಕವಲ್ಲ ಎಂದು ಹೇಳುವ ಪತ್ರಕರ್ತನ ಕರ್ತವ್ಯ, ಬೆದರಿಕೆಯಂತಿರದೆ ಸಲಹೆ ಸೂಚನೆಯಂತಿರ ಬೇಕಿತ್ತು. ಮುಖ್ಯಮಂತ್ರಿಯ ನಿರ್ಧಾರವನ್ನು ನ್ಯಾಯಾಲಯ, ರಾಜ್ಯಪಾಲರು, ಪ್ರಧಾನ ಮಂತ್ರಿ ಮತ್ತು ಪ್ರತಿಪಕ್ಷಗಳು ಕೂಡಾ ಮುಖ್ಯಮಂತ್ರಿಯ ಧೋರಣೆಯನ್ನು ವಿರೋಧಿಸಲು ಇಂತಹ ಕೀಳು ಮಟ್ಟದಲ್ಲಿ ಧ್ವನಿ ಎತ್ತರಿಸಿ ಮಾತನಾಡುವುದಿಲ್ಲ ಎಂದು ಹೇಳಿರುವ ಹಾಜಿ ಅಬ್ದುಲ್ ರಶೀದ್, ಮಾಧ್ಯಮಗಳ ಸುದ್ದಿ ವಾಚಕರ ಹೇಳಿಕೆಗಳು, ಪೂರ್ವಾಗ್ರಹ ಪೀಡಿತ ವಿಶ್ಲೇಷಣೆಯಾಗಿರದೆ, ಜನಮನದ ರಾಯಬಾರಿಯ ನಿರ್ದೇಶನದಂತೆ, ರಾಜ್ಯದ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.







