ಆದ್ಯತೆಯ ಮೇರೆಗೆ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧಿ ನೀಡಲು ಸುತ್ತೋಲೆ
ಬೆಂಗಳೂರು, ಎ.18: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿರುವ ಸಂದರ್ಭದಲ್ಲಿ ಐಸಿಎಂಆರ್ ಶಿಫಾರಸ್ಸುಗಳ ಪ್ರಕಾರ ಅಧಿಕ ಅಪಾಯವಿರುವ ಜನರಿಗೆ ಪ್ರತಿಬಂಧಕ ಔಷಧಿಯಾಗಿ ಹೈಡ್ರೋಕ್ಸಿಕ್ಲೋರೋಕ್ವಿನ್ ನೀಡಬಹುದು ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಆದ್ಯತೆಯ ಮೇರೆಗೆ ಆಸ್ಪತ್ರೆಗಳಿಗೆ ನೀಡಿದ್ದು, ಆದ್ಯತೆಯ ಅಡಿಯಲ್ಲಿ ವಿತರಿಸುವಂತೆ ಸೂಚಿಸಲಾಗಿದೆ.
ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ವರ್ಗದವರಿಗೆ, ಕೋವಿಡ್ 19 ತಪಾಸಣೆಗಾಗಿ ಮನೆ ಮನೆಗಳಿಗೆ ಭೇಟಿ ನೀಡುತ್ತಿರುವ ಕಣ್ಗಾವಲು ತಂಡಗಳಲ್ಲಿ ಕೆಲಸ ಮಾಡುತ್ತಿರುವ ಇಲಾಖಾ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ, ಕೋವಿಡ್ 19 ದೃಢಪಟ್ಟ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದವರಿಗೆ ನೀಡಬಹುದಾಗಿದೆ.
ರೋಗ ನಿರೋಧಕ ಕ್ರಮವಾಗಿ ನಿಯಂತ್ರಿಕ ವಲಯದಲ್ಲಿ ಕೆಲಸ ಮಾಡುವವರಿಗೆ, ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವಎಲ್ಲ ಅಧಿಕಾರಿಗಳಿಗೆ, ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್-19 ಸಂಬಂಧ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರು, ಆಂಬ್ಯುಲೆನ್ಸ್ ವಾಹನಗಳಲ್ಲಿ ಕೋವಿಡ್-19 ಸಂಬಂಧ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ, ಪೊಲೀಸ್ ಇಲಾಖೆ ಮತ್ತು ಇತರೆ ಯಾವುದೇ ಇಲಾಖೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ, ಕೊರೋನ ಸಂಬಂಧ ಕೆಲಸ ನಿರ್ವಹಿಸುತ್ತಿರುವ ಖಾಸಗಿ ವೈದ್ಯಕೀಯ ಸಿಬ್ಬಂದಿಗೆ ನೀಡಬಹುದಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಹಿರಿಯ ನಾಗರಿಕರು, ಈ ಹಿಂದೆ ಹೃದ್ರೋಗದಿಂದ ಬಳಲುತ್ತಿರುವವರು, ಜಿ6ಪಿಡಿ ಕೊರತೆ ಹೊಂದಿರುವವರು ಮತ್ತು 4 ಅಮಿನೋಕ್ವಿನೋಲೊನ್ಸ್ ಇದಕ್ಕೆ ಅತಿಸಂವೇದಿಯಾದ ವ್ಯಕ್ತಿಗಳು ಹಾಗೂ ಇತರೆ ದೀರ್ಘಕಾಲದ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ವೈದ್ಯಕೀಯ ತಪಾಸಣೆ ಹಾಗೂ ತಜ್ಞರ ಸಲಹೆ ಪಡೆದು ಇದನ್ನು ನೀಡಬಹುದಾಗಿದೆ ಎಂದು ಹೇಳಲಾಗಿದೆ.







