2 ವರ್ಷಗಳಿಂದ ಬಂಧನ ಕೇಂದ್ರಗಳಲ್ಲಿರುವ 'ಘೋಷಿತ ವಿದೇಶಿಯರ' ಬಿಡುಗಡೆಗೆ ಗುವಾಹಟಿ ಹೈಕೋರ್ಟ್ ನಿರ್ದೇಶ

ಹೊಸದಿಲ್ಲಿ,ಎ.18: ರಾಜ್ಯದ ಆರು ಬಂಧನ ಕೇಂದ್ರಗಳಲ್ಲಿರುವ ‘ಘೋಷಿತ ವಿದೇಶಿಯರು’ ಕಸ್ಟಡಿಯಲ್ಲಿ ಎರಡೂ ವರ್ಷಗಳಿಗೂ ಹೆಚ್ಚಿನ ಅವಧಿಯನ್ನು ಕಳೆದಿದ್ದರೆ ಅವರು ಜಾಮೀನಿನಲ್ಲಿ ಬಿಡುಗಡೆಗೊಳ್ಳುವಂತೆ ನೋಡಿಕೊಳ್ಳುವಂತೆ ಗುವಾಹಟಿ ಉಚ್ಚ ನ್ಯಾಯಾಲಯವು ಅಸ್ಸಾಂ ಪೊಲೀಸರಿಗೆ ನಿರ್ದೇಶ ನೀಡಿದೆ.
ಕೊರೋನ ವೈರಸ್ ಸೋಂಕು ಹರಡುವ ಭೀತಿಯಿಂದ ಈ ಘೋಷಿತ ವಿದೇಶಿಯರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ಸ್ಪಂದಿಸಿ ಗುವಾಹಟಿ ಉಚ್ಚ ನ್ಯಾಯಾಲಯವು ಈ ನಿರ್ದೇಶವನ್ನು ಹೊರಡಿಸಿದೆ.
ಅಸ್ಸಾಮಿನಲ್ಲಿ ಈವರೆಗೆ 35 ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಐವರು ಚೇತರಿಸಿಕೊಂಡಿದ್ದರೆ, ಓರ್ವ ರೋಗಿ ಮೃತಪಟ್ಟಿದ್ದಾನೆ.
ಎ.13ರಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠವು ಕನಿಷ್ಠ ಮೂರು ವರ್ಷಗಳನ್ನು ಬಂಧನ ಕೇಂದ್ರದಲ್ಲಿ ಕಳೆದವರನ್ನು ತಲಾ ಎರಡು ಲಕ್ಷ ರೂ.ಗಳ ಎರಡು ವ್ಯಕ್ತಿಗತ ಭದ್ರತೆಗಳ ಆಧಾರದಲ್ಲಿ ಬಿಡುಗಡೆಗೊಳಿಸಲು ಅವಕಾಶ ಕಲ್ಪಿಸಿದ್ದ ಶ್ರೇಷ್ಠ ನ್ಯಾಯಾಲಯದ 2019ರ ಆದೇಶವನ್ನು ಪರಿಷ್ಕರಿಸಿತ್ತು. ಈವರೆಗೆ ಇಂತಹ 27 ವ್ಯಕ್ತಿಗಳು ಸರ್ವೋಚ್ಚ ನ್ಯಾಯಾಲಯದ 2019ರ ಆದೇಶದ ಲಾಭ ಪಡೆದು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ. ಎ.13ರ ಆದೇಶವು ಜಾಮೀನು ಬಿಡುಗಡೆಗೆ ಕಸ್ಟಡಿ ಅವಧಿಯನ್ನು ಕನಿಷ್ಠ ಎರಡು ವರ್ಷಗಳಿಗೆ ತಗ್ಗಿಸಿದೆ, ಆದರೆ ಇತರ ಷರತ್ತುಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.
ಗೃಹ ಸಚಿವಾಲಯದ ಇತ್ತೀಚಿನ ಮಾಹಿತಿಗಳಂತೆ ಅಸ್ಸಾಮಿನ ಆರು ಬಂಧನ ಕೇಂದ್ರಗಳಲ್ಲಿ 802 ಜನರನ್ನಿರಿಸಲಾಗಿದೆ.







