ಮೈಸೂರಿನಲ್ಲಿ ಮತ್ತೆ 7 ಮಂದಿಗೆ ಕೊರೋನ: 80ಕ್ಕೇರಿದ ಸೋಂಕಿತರ ಸಂಖ್ಯೆ

ಮೈಸೂರು,ಎ.18: ಮೈಸೂರಿನಲ್ಲಿ ಮತ್ತೆ ಏಳು ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಒಟ್ಟು 58 ಮಂದಿ ಚಿಕಿತ್ಸೆ ಪಡೆಯುತಿದ್ದು, ಇದುವರೆಗೂ ಜಿಲ್ಲೆಯಲ್ಲಿ ಒಟ್ಟು ಕೊರೋನ ಸೋಂಕಿತರ ಸಂಖ್ಯೆ 80ಕ್ಕೆ ಏರಿದಂತಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ನಂಜನಗೂಡಿನ ಜ್ಯಬಿಲಿಯಂಟ್ ಕಂಪನಿಯ ನೌಕರಿನಿಗೆ ಕಾಣಿಸಿಕೊಂಡ ಕೊರೋನ ಸೋಂಕು ಜಿಲ್ಲಾಢಳಿತವನ್ನು ನಿದ್ದೆಗೆಡಿಸಿದೆ. ಕೊರೋನ ಸೋಂಕಿತರಲ್ಲಿ ಬಹುತೇಕ ಎಲ್ಲರೂ ಜ್ಯಬಿಲಿಯಂಟ್ ಕಂಪನಿಗೆ ಸೇರಿದವರು ಮತ್ತು ಅವರ ಸಂಪರ್ಕದಲ್ಲಿದ್ದವರೇ ಆಗಿದ್ದಾರೆ. ಇದರ ಜೊತೆಗೆ ಇಂದು 12 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಶನಿವಾರ ದೃಢಪಟ್ಟ ಏಳು ಮಂದಿ ಕೊರೋನ ಸೋಂಕಿತರಲ್ಲಿ ಆರು ಮಂದಿ ಜ್ಯಬಿಲಿಯಂಟ್ ಕಂಪನಿಗೆ ಸೇರಿದವರಾಗಿದ್ದರೆ, ಮತ್ತೊಬ್ಬರು ಮೈಸೂರು ತಾಲೂಕಿನ ಮೊಸಂಬಾಯನಹಳ್ಳಿಯ ವೃದ್ಧರಾಗಿದ್ದಾರೆ. ಹಾಗೆಯೇ ಮೈಸೂರು ತಾಲೂಕಿನ ಮೊಸಂಬಾಯನಹಳ್ಳಿಯ ಉಸಿರಾಟದ ತೊಂದರೆ ಇದ್ದ ಸುಮಾರು 65 ವರ್ಷದ ವೃದ್ಧರಿಗೆ ಕೋರೋನ ಸೋಂಕು ದೃಢಪಟ್ಟಿದ್ದು ಇದು ಜಿಲ್ಲಾಡಳಿತದ ನಿದ್ದೆಗೆಡಿಸಿದೆ.
ಈಗಾಗಲೇ ವೃದ್ಧನ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡಲಾಗಿದ್ದು, ಇವರ ಪ್ರೈಮರಿ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಪತ್ತೆ ಮಾಡಿ ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.







